ನವದೆಹಲಿ: ರಾಮ ಮಂದಿರ ಸಂಕೀರ್ಣ ನಿರ್ಮಾಣ ಜೂನ್ 2025 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಸಮಿತಿಯ ಸಭೆ 3 ದಿನಗಳ ಕಾಲ ನಡೆಯುತ್ತಿದ್ದು ನಾಳೆಗೆ ಪೂರ್ಣಗೊಳ್ಳಲಿದೆ. ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಮಿಶ್ರಾ, ದೇವಾಲಯದ ಸಂಕೀರ್ಣ ನಿರ್ಮಾಣವನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವುದಕ್ಕೆ ಉದ್ದೇಶಿಸಲಾಗಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ ದೇವಾಲಯದ ಶಿಖರದ ನಿರ್ಮಾಣವೇ 120 ದಿನಗಳ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
2025ರ ಫೆಬ್ರವರಿ ವೇಳೆಗೆ ಶಿಖರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸಂಕೀರ್ಣದಲ್ಲಿ ನಿರ್ಮಿಸಲಾಗುತ್ತಿರುವ ಸಪ್ತ ಮಂದಿರದ ವಿಗ್ರಹಗಳನ್ನು ಜೈಪುರದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಋಷಿಮುನಿಗಳ ಮತ್ತು ಸಂತರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಡಿಸೆಂಬರ್ 2024ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ರಾಮಮಂದಿರ ಸಂಕೀರ್ಣದ ಕಾಮಗಾರಿಯು ಜೂನ್ 30, 2025 ರೊಳಗೆ ಪೂರ್ಣಗೊಳ್ಳಲಿದೆ ಎಂದು ಮಿಶ್ರಾ ಹೇಳಿದ್ದಾರೆ.
ಏತನ್ಮಧ್ಯೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಗುರುವಾರ ಮಾತನಾಡಿ, ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳ ಸರಬರಾಜುಗಳನ್ನು ಸಕಾಲದಲ್ಲಿ ಆವರಣದಲ್ಲಿ ಇಳಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸಾಕಷ್ಟು ಸಂಖ್ಯೆಯ ಕಾರ್ಮಿಕರು ಯೋಜನೆಯಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಳ್ಳಲು ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
Advertisement