ಹರ್ಯಾಣ ವಿಧಾನಸಭೆ ಚುನಾವಣೆ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ 'ಶ್ರೀಮಂತ ಮಹಿಳೆ' ಸಾವಿತ್ರಿ ಜಿಂದಾಲ್ ಕಣಕ್ಕೆ!

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಸಚಿವ ಕಮಲ್ ಗುಪ್ತರನ್ನೇ ಬಿಜೆಪಿ ಕಣಕ್ಕಿಳಿಸಿದ ಕೆಲವೇ ದಿನಗಳ ಅಂತರದಲ್ಲಿ ಸಾವಿತ್ರಿ ಜಿಂದಾಲ್ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದಾರೆ.
 ಸಾವಿತ್ರಿ ಜಿಂದಾಲ್
ಸಾವಿತ್ರಿ ಜಿಂದಾಲ್
Updated on

ಚಂಡೀಘಡ: ಕುರುಕ್ಷೇತ್ರ ಬಿಜೆಪಿ ಸಂಸದ ನವೀನ್ ಜಿಂದಾಲ್ ಅವರ ತಾಯಿ 74 ವರ್ಷದ ಸಾವಿತ್ರಿ ಜಿಂದಾಲ್ ಅವರು ಈ ವರ್ಷ 29.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ದೇಶದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯ ಆಕಾಂಕ್ಷಿಯಾಗಿದ್ದ ಅವರು ಗುರುವಾರ ಹಿಸಾರ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಅಕ್ಟೋಬರ್ 5ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಸಚಿವ ಕಮಲ್ ಗುಪ್ತರನ್ನೇ ಬಿಜೆಪಿ ಕಣಕ್ಕಿಳಿಸಿದ ಕೆಲವೇ ದಿನಗಳ ಅಂತರದಲ್ಲಿ ಸಾವಿತ್ರಿ ಜಿಂದಾಲ್ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದಾರೆ. ದೇಶದ ಅತಿ ಶ್ರೀಮಂತ ಮಹಿಳೆಯಾದ ಸಾವಿತ್ರಿ ಜಿಂದಾಲ್ ಅವರು ಕಬ್ಬಿಣ ಮತ್ತು ಇಂಧನ ಸಮೂಹ ಸಂಸ್ಥೆಯಾದ ಒ.ಪಿ.ಜಿಂದಾಲ್ ಸಮೂಹದ ಅಧ್ಯಕ್ಷೆಯಾಗಿದ್ದಾರೆ. ಅವರ ಪುತ್ರ ನವೀನ್ ಜಿಂದಾಲ್ ಇತ್ತೀಚೆಗೆ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ, ಮಾರ್ಚ್ 24ರಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನವೀನ್ ಜಿಂದಾಲ್ ರನ್ನು ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಅವರು ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಕೆಲವೇ ದಿನಗಳ ಅಂತರದಲ್ಲಿ ಸಾವಿತ್ರಿ ಜಿಂದಾಲ್ ಕೂಡಾ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹಾಗೂ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸಮ್ಮುಖದಲ್ಲಿ ಹಿಸಾರ್ ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

 ಸಾವಿತ್ರಿ ಜಿಂದಾಲ್
ಕಾಂಗ್ರೆಸ್ ನ ಮಾಜಿ ಸಂಸದ, ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಬಿಜೆಪಿ ಸೇರ್ಪಡೆ; ಕುರುಕ್ಷೇತ್ರದಿಂದ ಟಿಕೆಟ್

ಮಾಜಿ ಕಾಂಗ್ರೆಸ್ ಶಾಸಕಿ ಹಾಗೂ ಸಚಿವೆಯೂ ಆಗಿರುವ ಸಾವಿತ್ರಿ ಜಿಂದಾಲ್, ತಾನು ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಕ್ಷೇತ್ರದ ಮೇಲೆ ಸಾವಿತ್ರಿ ಜಿಂದಾಲ್ ಕುಟುಂಬವು ಹಲವಾರು ದಶಕಗಳಿಂದ ಹಿಡಿತ ಹೊಂದಿದೆ. ಆದರೆ, ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲ್ಪಟ್ಟಿರುವ ಸಾವಿತ್ರಿ ಜಿಂದಾಲ್, ಸ್ವತಂತ್ರ ಅಭ್ಯರ್ಥಿಯಾಗಿ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಸಾವಿತ್ರಿ ಜಿಂದಾಲ್, ಹಿಸಾರ್‌ನ ಅಭಿವೃದ್ಧಿ ಮತ್ತು ಬದಲಾವಣೆಗೆಗಾಗಿ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿರು. “ಹಿಸಾರ್‌ನ ಜನರು ನನ್ನ ಕುಟುಂಬವಿದ್ದಂತೆ, ಓಂ ಪ್ರಕಾಶ್ ಜಿಂದಾಲ್ ಈ ಕುಟುಂಬದ ಜೊತೆ ನನಗೆ ಸಂಬಂಧ ಸ್ಥಾಪಿಸಿದರು. ಜನರ ನಿರೀಕ್ಷೆಗೆ ತಕ್ಕಂತೆ ಬದುಕಲು ಮತ್ತು ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಸಂಪೂರ್ಣವಾಗಿ ಸಮರ್ಪಿತಳಾಗಿದ್ದೇನೆಎಂದು ಅವರು ಹೇಳಿದರು. ಜಿಂದಾಲ್ ಗ್ರೂಪ್ ಸಂಸ್ಥಾಪಕ ಓಂ ಪ್ರಕಾಶ್ ಜಿಂದಾಲ್ ಹಿಸಾರ್ ನಿಂದ ಮೂರು ಬಾರಿ ಗೆದ್ದಿದ್ದಾರೆ (1991, 2000 ಮತ್ತು 2005). ಅವರು 2005 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದಾಗ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಸಾವಿತ್ರಿ ನಂತರ ರಾಜಕೀಯಕ್ಕೆ ಸೇರಿದರು ಮತ್ತು ಎರಡು ಬಾರಿ ಹಿಸಾರ್ ವಿಧಾನಸಭಾ ಸ್ಥಾನದಿಂದ ಶಾಸಕರಾಗಿ ಆಯ್ಕೆಯಾದರು.

ಅವರು 2005 ರಲ್ಲಿ ಹಿಸಾರ್‌ನಿಂದ ಉಪಚುನಾವಣೆಯಲ್ಲಿ ಗೆದ್ದರು ಮತ್ತು ಹೂಡಾ ಸರ್ಕಾರದಲ್ಲಿ ಸಚಿವರಾದರು ಮತ್ತು 2009 ರಲ್ಲಿ ಮರು ಆಯ್ಕೆಯಾದರು. 2014 ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಕಮಲ್ ಗುಪ್ತಾ ಅವರಿಂದ ಹಿಸಾರ್‌ನಲ್ಲಿ ಸೋಲಿಸಲ್ಪಟ್ಟರು. ಈ ವರ್ಷದ ಮಾರ್ಚ್‌ನಲ್ಲಿ ಅವರು ಕಾಂಗ್ರೆಸ್ ತೊರೆದಾಗ ಅವರ ಮಗ ನವೀನ್ ಕೂಡ ಪಕ್ಷವನ್ನು ತೊರೆದರು ಮತ್ತು ನಂತರ ಬಿಜೆಪಿ ಸೇರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com