ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆ ನಿರ್ಧಾರವನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಭಾನುವಾರ ಸ್ವಾಗತಿಸಿದ್ದಾರೆ. ಆದರೆ ಎರಡು ದಿನಗಳ ವಿಳಂಬವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಐಎಎನ್ ಎಸ್ ಸುದ್ದಿಸಂಸ್ಥೆಯೊಂದಿಗೆ ಪ್ರತಿಕ್ರಿಯಿಸಿದ ಯಾದವ್, ಕೇಜ್ರಿವಾಲ್ ಅವರ ನಿರ್ಧಾರವನ್ನು ಸ್ವಾಗತಿಸುತ್ತೇವೆ, ಸ್ವಲ್ಪ ತಡವಾದರೂ ಇದು ಒಳ್ಳೆಯ ಕ್ರಮ ಎಂದು ಹೇಳಿದರು.
ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಇನ್ನೂ ಎರಡು ದಿನ ಯಾಕೆ ಕಾಯುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನೀವು ರಾಜೀನಾಮೆ ನೀಡುವುದಾದರೆ ಕೂಡಲೇ ರಾಜೀನಾಮೆ ನೀಡಿ. ಉತ್ತಮ ಆಡಳಿತ ನಮ್ಮ ಒತ್ತಾಯವಾಗಿದ್ದು, ಸರ್ಕಾರವನ್ನು ಜೈಲಿನಿಂದ ಓಡಿಸಲು ಸಾಧ್ಯವಿಲ್ಲ ಎಂದರು.
ಬದಲಾವಣೆಗೆ ಎಂದಿಗೂ ತಡಮಾಡಬಾರದು. ದೆಹಲಿ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಎರಡು, ನಾಲ್ಕು ಅಥವಾ ಐದು ತಿಂಗಳ ಹಿಂದೆಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆ ನಾನು ಹೆಚ್ಚು ಸಂತೋಷವಾಗಿರುತ್ತಿದ್ದೆ ಎಂದು ದೇವೇಂದ್ರ ಯಾದವ್ ಹೇಳಿದರು.
Advertisement