ರಾಂಚಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾರ್ಖಂಡ್ ನ ರಾಂಚಿಯಲ್ಲಿ ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು.
ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶದ ವಂದೇ ಭಾರತ್ ರೈಲುಗಳಿಗೆ ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.
ಇದಕ್ಕೂ ಮುನ್ನಾ ಟಾಟಾನಗರದಿಂದ ರೈಲುಗಳಿಗೆ ಚಾಲನೆ ನೀಡಲು ಪ್ರಧಾನಿ ನಿರ್ಧರಿಸಿದ್ದರು. ಆದರೆ ಅಸ್ಪಷ್ಟ ಗೋಚರ ಹಾಗೂ ಪ್ರತಿಕೂಲ ಹವಾಮಾನದ ಕಾರಣ ಅವರ ಹೆಲಿಕಾಪ್ಟರ್ ಅಲ್ಲಿ ಟೇಕ್ ಆಫ್ ಆಗಲಿಲ್ಲ. ಹೀಗಾಗಿ ರಾಂಚಿಯಿಂದ ನೂತನ ರೈಲುಗಳ ಸಂಚಾರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಟಾಟಾನಗರ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಹೊಸ ರೈಲುಗಳು ಟಾಟಾನಗರ-ಪಾಟ್ನಾ, ಬ್ರಹ್ಮಪುರ-ಟಾಟಾನಗರ, ರೂರ್ಕೆಲಾ-ಹೌರಾ, ದಿಯೋಘರ್-ವಾರಣಾಸಿ, ಭಾಗಲ್ಪುರ್-ಹೌರಾ ಮತ್ತು ಗಯಾ-ಹೌರಾ ಮಾರ್ಗಗಳಲ್ಲಿ ಚಲಿಸುತ್ತವೆ. ಈ ರೈಲುಗಳು ವೇಗದ ಸಂಪರ್ಕವನ್ನು ನೀಡಲಿವೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಪರಿಚಯದಿಂದ ಸಾಮಾನ್ಯ ಪ್ರಯಾಣಿಕರು, ವೃತ್ತಿಪರರು, ವ್ಯಾಪಾರ ಮತ್ತು ವಿದ್ಯಾರ್ಥಿ ಸಮುದಾಯಗಳಿಗೆ ಅನುಕೂಲವಾಗಲಿದೆ. ಈ ರೈಲುಗಳು ದಿಯೋಘರ್ (ಜಾರ್ಖಂಡ್‌ನ ಬೈದ್ಯನಾಥ ಧಾಮ), ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ (ಉತ್ತರ ಪ್ರದೇಶ), ಕಾಳಿಘಾಟ್, ಕೋಲ್ಕತ್ತಾದ ಬೇಲೂರು ಮಠ (ಪಶ್ಚಿಮ ಬಂಗಾಳ) ಮುಂತಾದ ಯಾತ್ರಾ ಸ್ಥಳಗಳಿಗೆ ತ್ವರಿತ ಪ್ರಯಾಣ ಸೇವೆ ಮೂಲಕ ಈ ಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.
ಧನ್‌ಬಾದ್‌ನ ಕಲ್ಲಿದ್ದಲು ಮತ್ತು ಗಣಿ ಉದ್ಯಮ ಕೋಲ್ಕತ್ತಾದ ಸೆಣಬಿನ ಕೈಗಾರಿಕೆ, ದುರ್ಗಾಪುರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಸಂಬಂಧಿತ ವಲಯಕ್ಕೂ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಹೇಳಿಕೆ ತಿಳಿಸಿದೆ.
Advertisement