ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸೋಮವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರೈತರು, ಮಹಿಳೆಯರು ಮತ್ತು ಯುವಕರಿಗೆ ಹಲವು ಭರವಸೆಗಳನ್ನು ನೀಡಿದೆ.
ಹಾತ್ ಬದ್ಲೇಗಾ ಹಲಾತ್ ಎಂಬ ಪ್ರಣಾಳಿಕೆಯ ಪ್ರಮುಖ ಅಂಶವೆಂದರೆ ನೈಸರ್ಗಿಕ ವಿಕೋಪಗಳ ವಿರುದ್ಧ ಎಲ್ಲಾ ಬೆಳೆಗಳಿಗೆ ವಿಮೆ ಮತ್ತು ಸೇಬಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) 72 ರೂ. ನಿಗದಿಪಡಿಸುವುದಾಗಿ ಭರವಸೆ ನೀಡಿದೆ.
ಇಂದು ಇಲ್ಲಿನ ಪಕ್ಷದ ಕಚೇರಿಯಲ್ಲಿ ಎಐಸಿಸಿ ಮುಖ್ಯ ವಕ್ತಾರ ಪವನ್ ಖೇರಾ ಮತ್ತು ಪಿಸಿಸಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಅವರು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಜಮ್ಮು, ಕಾಶ್ಮೀರ"ನಾವು ವರ್ಷಕ್ಕೆ ಭೂರಹಿತರು, ಹಿಡುವಳಿದಾರರು ಮತ್ತು ಜಮೀನು ಹೊಂದಿರುವ ಕೃಷಿ ಕುಟುಂಬಗಳಿಗೆ ರೂ 4,000 ಹೆಚ್ಚುವರಿ ಆರ್ಥಿಕ ಬೆಂಬಲವನ್ನು ನೀಡುತ್ತೇವೆ. ರಾಜ್ಯದ ಭೂಮಿಯನ್ನು ಸಾಗುವಳಿ ಮಾಡುವ ಭೂರಹಿತ ರೈತರಿಗೆ 99 ವರ್ಷಗಳ ಗುತ್ತಿಗೆಯನ್ನು ಸಹ ವ್ಯವಸ್ಥೆ ಮಾಡುತ್ತೇವೆ" ಎಂದು ಖೇರಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಶೇ.100 ರಷ್ಟು ನೀರಾವರಿ ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲಾ ಮಟ್ಟದ ನೀರಾವರಿ ಯೋಜನೆಗಳಿಗೆ 2,500-ಕೋಟಿ ರೂ. ನಿಧಿ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಅರ್ಹ ನಿರುದ್ಯೋಗಿ ಯುವಕರಿಗೆ ಒಂದು ವರ್ಷದವರೆಗೆ ಪ್ರತಿ ತಿಂಗಳು 3,500 ರೂ.ವರೆಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.
30 ದಿನಗಳಲ್ಲಿ ಉದ್ಯೋಗ ಕ್ಯಾಲೆಂಡರ್ ನೀಡುವ ಮೂಲಕ ಖಾಲಿ ಇರುವ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ.
ಪೊಲೀಸ್, ಅಗ್ನಿಶಾಮಕ ದಳ ಮತ್ತು ಅರಣ್ಯ ಸಂರಕ್ಷಣಾ ಪಡೆಗಳಿಗೆ ವಿಶೇಷ ಗಡಿ ನೇಮಕಾತಿಯನ್ನು ಪುನರುಜ್ಜೀವನಗೊಳಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
Advertisement