ದುರ್ಗ್: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಗಣೇಶ ಪೆಂಡಾಲ್ ಹಾಕಿದ್ದ ಅಬ್ಬರದ ಸಂಗೀತದ ಬಗ್ಗೆ ಆಯೋಜಕರೊಂದಿಗೆ ವಾಗ್ವಾದ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ದುರ್ಗ್‌ನಲ್ಲಿ ನಡೆದಿದೆ.
ಪುರಾಣಿ ಭಿಲಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಹತ್ಖೋಜ್ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಧನ್ನು ಲಾಲ್ ಸಾಹು (55) ಮತ್ತು ಅವರ ಸಂಬಂಧಿಕರು ಶನಿವಾರ ರಾತ್ರಿ ಅವರ ಮನೆಯ ಸಮೀಪದ ಗಣಪತಿ ಪಂಡಲ್‌ನಲ್ಲಿ ಅಬ್ಬರದ ಸಂಗೀತವನ್ನು ಆಕ್ಷೇಪಿಸಿದ್ದಾರೆ. ಸಾಹು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರೂ ಆಯೋಜಕರು ಅವರ ಮಾತನ್ನು ಕೇಳಿಲ್ಲ. ಬಳಿಕ ಸಾಹು ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿದ್ದು, ತಂಡ ಅಲ್ಲಿಗೆ ಆಗಮಿಸಿ ಸಂಗೀತವನ್ನು ನಿಲ್ಲಿಸಲು ಆಯೋಜಕರಿಗೆ ಸೂಚಿಸಿದ್ದಾರೆ.
ಆದಾಗ್ಯೂ, ಸಾಹು ಮತ್ತು ಆಯೋಜಕರ ನಡುವೆ ಜಗಳ ಮುಂದುವರಿದಿದ್ದು, ಎರಡೂ ಕಡೆಯವರು ಪೊಲೀಸ್ ಠಾಣೆಗೆ ಬಂದರೂ ದೂರು ದಾಖಲಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಮನೆಯ ಮೇಲ್ಛಾವಣಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾಹು ಪತ್ತೆಯಾಗಿದ್ದಾರೆ. ಆಯೋಜಕರೊಬ್ಬರು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಹು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಸಂಬಂಧ ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement