ದೆಹಲಿ ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಅತಿಶಿ

ಅತಿಶಿ ಅವರು ಸಕ್ಸೇನಾ ಅವರನ್ನು ಭೇಟಿಯಾಗಿ, ದೆಹಲಿಯಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ.
ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಅತಿಶಿ
ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಅತಿಶಿ
Updated on

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಆರು ತಿಂಗಳು ಜೈಲುವಾಸ ಮುಗಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಸಂಜೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿ ರಾಜೀನಾಮೆ ಸಲ್ಲಿಸಿದ್ದಾರೆ.

ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇಂದು ಸಂಜೆ 4.30ಕ್ಕೆ, ನಿಯೋಜಿತ ಮುಖ್ಯಮಂತ್ರಿ ಅತಿಶಿ ಸೇರಿದಂತೆ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ರಾಜಭವನಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು.

ನಂತರ ಅತಿಶಿ ಅವರು ಸಕ್ಸೇನಾ ಅವರನ್ನು ಭೇಟಿಯಾಗಿ, ದೆಹಲಿಯಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ.

ಅತಿಶಿ ಅವರು ದೆಹಲಿ ಸಿಎಂ ಆಗುತ್ತಿರುವ ಮೂರನೇ ಮಹಿಳೆ ಮತ್ತು ಸಿಎಂ ಸ್ಥಾನ ಅಲಂಕರಿಸುತ್ತಿರುವ ಅತ್ಯಂತ ಕಿರಿಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನಂತರ ಅತಿಶಿ(43) ಅವರು ದೇಶದ ಎರಡನೇ ಪ್ರಸ್ತುತ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ.

ಅತಿಶಿ ಅವರಿಗಿಂತ ಮೊದಲು ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ಅವರು ದೆಹಲಿ ಮಹಿಳಾ ಮುಖ್ಯಮಂತ್ರಿಗಳಾಗಿದ್ದರು. 1998 ರಿಂದ 2013 ರವರೆಗೆ 15 ವರ್ಷಗಳ ಕಾಲ ಶೀಲಾ ದೀಕ್ಷಿತ್ ಅವರು ದೆಹಲಿ ಮುಖ್ಯಮಂತ್ರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಆದರೆ ಸ್ವರಾಜ್ ಅವರು 1998 ರಲ್ಲಿ ಕೇವಲ 52 ದಿನಗಳ ಕಾಲ ಸಿಎಂ ಆಗಿದ್ದರು.

ದೀಕ್ಷಿತ್ ಅವರು ದೆಹಲಿಯ ಮುಖ್ಯಮಂತ್ರಿಯಾದಾಗ ಅವರಿಗೆ 60 ವರ್ಷವಾಗಿತ್ತು. ಸ್ವರಾಜ್ ಅವರು 46ನೇ ವಯಸ್ಸಿನಲ್ಲಿ ಸಿಎಂ ಹುದ್ದೆಯನ್ನು ಅಲಂಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com