ಶ್ರೀನಗರ: ದಶಕದ ನಂತರ ಬಿಗಿ ಭದ್ರತೆ ಮಧ್ಯೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಇಂದು ಬುಧವಾರ ನಡೆಯುತ್ತಿದೆ. ಇಂದು ಮೊದಲ ಹಂತದ ವಿಧಾನಸಭಾ ಚುನಾವಣೆಯು ನಡೆಯುತ್ತಿದ್ದು, ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಕೇಂದ್ರ ಎನ್ ಡಿಎ ಸರ್ಕಾರ ಆಗಸ್ಟ್ 2019 ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ ಕೂಡ ವಿಶೇಷ ಮಹತ್ವ ಪಡೆದಿದೆ. ಇಂದಿನ ಮೊದಲನೇ ಹಂತದ ಮತದಾನದಲ್ಲಿ 24 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಕಾಶ್ಮೀರದ 16 ಮತ್ತು ಜಮ್ಮುವಿನ 8 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 219 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
11,76,462 ಪುರುಷರು, 11,51,058 ಮಹಿಳೆಯರು ಮತ್ತು 60 ತೃತೀಯ ಲಿಂಗದ ವ್ಯಕ್ತಿಗಳು ಸೇರಿದಂತೆ ಒಟ್ಟು 23,27,580 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 18 ರಿಂದ 19 ವರ್ಷ ವಯಸ್ಸಿನ 1.23 ಲಕ್ಷ ಯುವಕರು, 28,309 ವಿಕಲಚೇತನರು (PwDs), ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 15,774 ವೃದ್ಧ ಮತದಾರರು ಈ ಹಂತದ ಅರ್ಹ ಮತದಾರರಲ್ಲಿ ಸೇರಿದ್ದಾರೆ ಎಂದು ಚುನಾವಣಾ ಆಯೋಗ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತದಾನ ಪ್ರಕ್ರಿಯೆ ಸುಗಮವಾಗಿ ಸಾಗಲು 302 ನಗರ ಮತ್ತು 2,974 ಗ್ರಾಮೀಣ ಕೇಂದ್ರಗಳು ಸೇರಿದಂತೆ 3,276 ಮತಗಟ್ಟೆಗಳಲ್ಲಿ 14,000 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿ ಸೇರಿದಂತೆ ನಾಲ್ವರು ಚುನಾವಣಾಧಿಕಾರಿಗಳ ತಂಡ ಇರಲಿದೆ.
ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ ವಿ.ಕೆ. ಬಿರ್ಡಿ, ಹೆಚ್ಚಿನ ಮತದಾನಕ್ಕೆ ಅನುಕೂಲವಾಗುವಂತೆ ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು: ಇಂದು ಮೊದಲ ಹಂತದಲ್ಲಿ ಹಲವಾರು ಪ್ರಮುಖ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಸಿಪಿಐ (ಎಂ)ನ ಮೊಹಮ್ಮದ್ ಯೂಸುಫ್ ತರಿಗಾಮಿ ಅವರು ಕುಲ್ಗಾಮ್ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಎಐಸಿಸಿಯ ಗುಲಾಮ್ ಅಹ್ಮದ್ ಮಿರ್ ಅವರು ದೂರೂರಿನಿಂದ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ ದಮ್ಹಾಲ್ ಹಾಜಿಪೋರಾದಿಂದ ಮತ್ತೊಂದು ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ದೇವ್‌ಸರ್‌ನಿಂದ ಸರ್ತಾಜ್ ಮದ್ನಿ (ಪಿಡಿಪಿ) ಮತ್ತು ಶಾಂಗುಸ್-ಅನಂತ್‌ನಾಗ್‌ನಿಂದ ಅಬ್ದುಲ್ ರೆಹಮಾನ್ ವೀರಿ (ಪಿಡಿಪಿ) ಕೂಡ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಶ್ರೀಗುಫ್ವಾರಾ-ಬಿಜ್‌ಬೆಹರಾದಲ್ಲಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಪಿಡಿಪಿಯ ಇಲ್ತಿಜಾ ಮುಫ್ತಿ ಅವರು ನ್ಯಾಷನಲ್ ಕಾನ್ಫರೆನ್ಸ್‌ನ ಬಶೀರ್ ಅಹ್ಮದ್ ವೀರಿ ಮತ್ತು ಬಿಜೆಪಿಯ ಸೋಫಿ ಮೊಹಮ್ಮದ್ ಯೂಸುಫ್ ಅವರೊಂದಿಗೆ ತ್ರಿಕೋನ ಸ್ಪರ್ಧೆಯಲ್ಲಿದ್ದಾರೆ. ಈ ಕ್ಷೇತ್ರವು ರಾಜೌರಿ-ಅನಂತನಾಗ್ ಲೋಕಸಭಾ ಕ್ಷೇತ್ರದ ಭಾಗವಾಗಿದೆ.
ಭಯೋತ್ಪಾದನೆ ಪ್ರಕರಣದ ಆರೋಪಿಯೂ ಆಗಿರುವ ಪಿಡಿಪಿ ಯುವ ಘಟಕದ ನಾಯಕ ವಹೀದ್ ಪಾರಾ ಪುಲ್ವಾಮಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ಈಗ ಎನ್‌ಸಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಅವರ ಮಾಜಿ ಪಕ್ಷದ ಸಹೋದ್ಯೋಗಿ ಮೊಹಮ್ಮದ್ ಖಲೀಲ್ ಬಂದ್‌ನಿಂದ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಮಾಜಿ ಜಮಾತ್-ಎ-ಇಸ್ಲಾಮಿ ಸದಸ್ಯ ತಲತ್ ಮಜೀದ್ ಅಲಿ ಅವರ ಪ್ರವೇಶದಿಂದ ಸ್ಪರ್ಧೆಯು ಮತ್ತಷ್ಟು ಜಟಿಲವಾಗಿದೆ.
Advertisement