ನವದೆಹಲಿ: ತಮ್ಮನ್ನು ಹತ್ಯೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಅಮೇರಿಕಾದಲ್ಲಿ ಭಾರತ ಸರ್ಕಾರದ ವಿರುದ್ಧ ಖಲಿಸ್ತಾನಿ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನುನ್ ದಾಖಲಿಸಿರುವ ಪ್ರಕರಣದ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದೆ.
ಪನ್ನುನ್ ಆರೋಪಗಳನ್ನು ಅನಗತ್ಯ ಮತ್ತು ಆಧಾರರಹಿತ ಆರೋಪಗಳು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈಗ ಪ್ರಕರಣ ದಾಖಲಾಗಿರುವುದರಿಂದ ಮೂಲ ಪರಿಸ್ಥಿತಿಯ ಬಗ್ಗೆ ಭಾರತದ ದೃಷ್ಟಿಕೋನವನ್ನು ಬದಲಾಯಿಸುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸ್ಪಷ್ಟಪಡಿಸಿದ್ದಾರೆ.
"ನಾವು ಮೊದಲೇ ಹೇಳಿದಂತೆ, ಇವು ಸಂಪೂರ್ಣವಾಗಿ ಅನಗತ್ಯ ಮತ್ತು ಆಧಾರರಹಿತ ಆರೋಪಗಳಾಗಿವೆ. ಈಗ ಈ ನಿರ್ದಿಷ್ಟ ಪ್ರಕರಣವನ್ನು ದಾಖಲಿಸಲಾಗಿದೆ. ಇದು ಈಗಾಗಲೇ ಇರುವ ಪರಿಸ್ಥಿತಿಯ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಬದಲಿಸುವುದಿಲ್ಲ. ಈ ನಿರ್ದಿಷ್ಟ ಪ್ರಕರಣದ ಹಿಂದಿನ ವ್ಯಕ್ತಿಯ ಬಗ್ಗೆ ಗಮನ ಹರಿಸುವಂತೆ ನಿಮ್ಮನ್ನು ಕೇಳುತ್ತೇನೆ, ನಮಗೆಲ್ಲರಿಗೂ ಅವರ ಪೂರ್ವಾಪರಗಳು ಚೆನ್ನಾಗಿ ತಿಳಿದಿವೆ,”ಎಂದು ವಿದೇಶಾಂಗ ಕಾರ್ಯದರ್ಶಿಗಳು, ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯ ಮೊದಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪನ್ನುನ್ ಭಾರತದಿಂದ ಭಯೋತ್ಪಾದಕನೆಂದು ಘೋಷಿಸಲ್ಪಟ್ಟಿದ್ದು, ಅಮೇರಿಕನ್ ಮತ್ತು ಕೆನಡಾದ ಪೌರತ್ವವನ್ನು ಹೊಂದಿದ್ದಾರೆ. ಪನ್ನುನ್ ಎಂಬ ವ್ಯಕ್ತಿ ಪ್ರತಿನಿಧಿಸುವ ಸಂಸ್ಥೆಯು ಕಾನೂನುಬಾಹಿರ ಸಂಸ್ಥೆಯಾಗಿದೆ, 1967 ರ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯಡಿಯಲ್ಲಿ ಅದನ್ನು ಘೋಷಿಸಲಾಗಿದೆ ಮತ್ತು ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣದಿಂದಾಗಿ ಪನ್ನುನ್ ಪ್ರತಿನಿಧಿಸುವ ಸಂಸ್ಥೆಯನ್ನು ಕಾನೂನು ಬಾಹಿರ ಸಂಸ್ಥೆ ಎಂದು ಘೋಷಣೆ ಮಾಡಲಾಗಿದೆ ಎಂಬ ಅಂಶವನ್ನು ನಾನು ಒತ್ತಿಹೇಳುತ್ತೇನೆ. ಮತ್ತು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿರುವ ವಿಧ್ವಂಸಕ ಚಟುವಟಿಕೆಗಳು ಈ ಸಂಸ್ಥೆಯಿಂದ ನಡೆಯುತ್ತಿದೆ ಎಂದು "ಹತ್ಯೆ'ಯತ್ನದ ಕುರಿತು ಪನ್ನುನ್ ಯುಎಸ್‌ನಲ್ಲಿ ಭಾರತೀಯ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡುವುದರ ಕುರಿತು ಮಿಸ್ರಿ ಹೇಳಿದರು.
ನವೆಂಬರ್‌ನಲ್ಲಿ, ಯುಎಸ್ ನ್ಯಾಯಾಂಗ ಇಲಾಖೆ ಪನ್ನುನ್ ಹತ್ಯೆಗೆ ವಿಫಲವಾದ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತೀಯ ಪ್ರಜೆಯ ವಿರುದ್ಧ ದೋಷಾರೋಪಣೆಯನ್ನು ಬಹಿರಂಗಪಡಿಸಿದೆ.
ಪ್ರಾಸಿಕ್ಯೂಟರ್‌ಗಳ ಪ್ರಕಾರ ಪನ್ನುನ್ ಹತ್ಯೆಯನ್ನು ನಡೆಸಲು ಓರ್ವ ವ್ಯಕ್ತಿಯನ್ನು ನೇಮಿಸಿಕೊಳ್ಳಲು ನಿಖಿಲ್ ಗುಪ್ತಾ ಎಂಬ ಭಾರತೀಯನನ್ನು ಭಾರತೀಯ ಅಧಿಕಾರಿಯೊಬ್ಬರು ನಿಯೋಜಿಸಿದ್ದರು, ಈ ಹತ್ಯೆಯ ಯತ್ನವನ್ನು ಅಮೇರಿಕಾ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ನ್ಯಾಯಾಂಗ ಇಲಾಖೆ ಹೇಳಿಕೊಂಡಿದೆ.
Advertisement