ಮುಂಬೈ: ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರ ವಿರುದ್ಧ ಬರುವ ನಕಲಿ ಮತ್ತು ಸುಳ್ಳು ವಿಷಯವನ್ನು ಗುರುತಿಸಲು ಮಾಹಿತಿ ತಂತ್ರಜ್ಞಾನ (ಐಟಿ) ತಿದ್ದುಪಡಿ ನಿಯಮಗಳನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಅಸಂವಿಧಾನಿಕ ಎಂದು ಪರಿಗಣಿಸಿದೆ ತಳ್ಳಿಹಾಕಿದೆ.
ಕಳೆದ ಜನವರಿಯಲ್ಲಿ ತಿದ್ದುಪಡಿ ಮಾಡಿದ ಐಟಿ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಬಗ್ಗೆ ವಿಭಿನ್ನ ತೀರ್ಪು ನೀಡಿದ್ದರಿಂದ ವಿಚಾರಣೆಯನ್ನು ನ್ಯಾಯಮೂರ್ತಿ ಎ ಎಸ್ ಚಂದೂರ್ಕರ್ ಅವರ ನೇತೃತ್ವದ ಪೀಠಕ್ಕೆ ವರ್ಗಾಯಿಸಲಾಗಿತ್ತು.
ನಿಯಮಗಳು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿವೆ ಎಂದು ನ್ಯಾಯಮೂರ್ತಿ ಚಂದೂರ್ಕರ್ ಶುಕ್ರವಾರ ಹೇಳಿದ್ದಾರೆ.
ಈ ಪ್ರಕರಣವನ್ನು ಕೂಲಂಕಷವಾಗಿ ಪರಿಗಣಿಸಿದ್ದೇನೆ. ಭಾರತ ಸಂವಿಧಾನದ ಆರ್ಟಿಕಲ್ 14 (ಸಮಾನತೆಯ ಹಕ್ಕು), 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 19 (1) (ಜಿ) (ಸ್ವಾತಂತ್ರ್ಯ ಮತ್ತು ವೃತ್ತಿಯ ಹಕ್ಕು) ಉಲ್ಲಂಘನೆಯಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಈ ತೀರ್ಪಿನೊಂದಿಗೆ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಮತ್ತು ಇತರರು ಸರ್ಕಾರದ ಬಗ್ಗೆ ನಕಲಿ ಅಥವಾ ಸುಳ್ಳು ವಿಷಯವನ್ನು ಗುರುತಿಸಲು ಫ್ಯಾಕ್ಟ್ ಚೆಕಿಂಗ್ ಯುನಿಟ್ (FCU) ಸ್ಥಾಪಿಸುವ ನಿಬಂಧನೆ ಸೇರಿದಂತೆ ಹೊಸ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ಅಂಗೀಕರಿಸಿತು.
ಕಳೆದ ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ವಿಭಿನ್ನ ತೀರ್ಪು ನೀಡಿದ ನಂತರ ಐಟಿ ನಿಯಮಗಳ ವಿರುದ್ಧದ ಅರ್ಜಿಗಳನ್ನು ನ್ಯಾಯಮೂರ್ತಿ ಚಂದೂರ್ಕರ್ ಅವರಿಗೆ ಉಲ್ಲೇಖಿಸಲಾಗಿತ್ತು.
ಕಳೆದ ಏಪ್ರಿಲ್ 6, 2023 ರಂದು, ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ಗೆ ತಿದ್ದುಪಡಿಗಳನ್ನು ಪ್ರಕಟಿಸಿತು, ಇದರಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ನಕಲಿ, ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಆನ್‌ಲೈನ್ ವಿಷಯವನ್ನು ತೆಗೆದುಹಾಕಲು ಫ್ಯಾಕ್ಟ್ ಚೆಕ್ ಯೂನಿಟ್ ಗೆ ಅವಕಾಶವಿದೆ ಎಂದು ಹೇಳಲಾಗಿತ್ತು.
Advertisement