ಆಯುಷ್ಮಾನ್ ಭಾರತ್ ವಿಸ್ತರಣೆ; ಅಕ್ಟೋಬರ್ ನಿಂದ ಜಾರಿಗೆ: ಕೇಂದ್ರ ಸಚಿವ ಜೆ.ಪಿ ನಡ್ಡಾ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರ ದೃಷ್ಟಿಯ ನಾಯಕತ್ವದಲ್ಲಿ 2018 ಸೆಪ್ಟೆಂಬರ್|ನಲ್ಲಿ ಈ ಯೋಜನೆ ಪ್ರಾರಂಭಿಸಲಾಯಿತು.
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ
Updated on

ನವದೆಹಲಿ: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿಗಳ ಜನ ಆರೋಗ್ಯ ಯೋಜನೆ ದೇಶದ ಜನರ ಆರೋಗ್ಯ ಸಂರಕ್ಷಣೆಯಲ್ಲಿ ಒಂದು ಮೈಲಿಗಲ್ಲು ಆಗಿದ್ದು, ವಿಮಾ ರಕ್ಷೆ 70 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾಗಿರುವವರಿಗೆ ವಿಸ್ತರಣೆ ಈ ವರ್ಷದ ಅಕ್ಟೋಬರ್ ನಿಂದ ಅದು ಜಾರಿಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿಗಳ ಜನ ಆರೋಗ್ಯ ಯೋಜನೆ(ಎಬಿ-ಪಿಎಂಜೆಎವೈ)ಯ 6ನೇ ವಾರ್ಷಿಕೋತ್ಸವ ಆಚರಿಸುತ್ತಿರುವಾಗ ಇದು ಅಪಾರ ಹೆಮ್ಮೆ ಮತ್ತು ಪ್ರತಿಬಿಂಬದ ಕ್ಷಣವಾಗಿದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಲೆಕ್ಕಿಸದೆ ಎಬಿ-ಪಿಎಂಜೆಎವೈ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸುವ ಸರ್ಕಾರದ ಇತ್ತೀಚಿನ ನಿರ್ಧಾರವು ದೇಶದಲ್ಲಿ ಬದಲಾಗುತ್ತಿರುವ ಜನಸಂಖ್ಯಾ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವ ಸೂಕ್ಷ್ಮವಾದ ಮತ್ತು ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರ ದೃಷ್ಟಿಯ ನಾಯಕತ್ವದಲ್ಲಿ 2018 ಸೆಪ್ಟೆಂಬರ್|ನಲ್ಲಿ ಈ ಯೋಜನೆ ಪ್ರಾರಂಭಿಸಲಾಯಿತು. ಎಬಿ-ಪಿಎಂಜೆಎವೈ ವಿಶ್ವದ ಅತಿದೊಡ್ಡ ಆರೋಗ್ಯ ಉಪಕ್ರಮಗಳಲ್ಲಿ ಒಂದಾಗಿ ಬೆಳೆದಿದೆ. ಇದು ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಅತ್ಯಂತ ದುರ್ಬಲರಿಗೆ ಸಮಾನವಾದ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಬದ್ಧತೆಯನ್ನು ಪ್ರತಿನಿಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಕಳೆದ 6 ವರ್ಷಗಳಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಯು ಲಕ್ಷಾಂತರ ಜೀವಗಳಿಗೆ ತಲುಪಿದೆ. ಭರವಸೆ, ಚಿಕಿತ್ಸೆ ಮತ್ತು ಅನೇಕ ಸಂದರ್ಭಗಳಲ್ಲಿ ಜೀವ ಉಳಿಸುವ ಚಿಕಿತ್ಸೆಯನ್ನು ನೀಡುತ್ತಿದೆ. ಎಬಿ-ಪಿಎಂಜೆಎವೈ ಪ್ರಯಾಣವು ತನ್ನ ಜನರ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸುವ ಹಂಚಿಕೆಯ ಗುರಿಯೊಂದಿಗೆ ರಾಷ್ಟ್ರವು ಒಟ್ಟಾಗಿ ಬಂದಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್‌ ಯೋಜನೆ ಯಾವುದೇ ಭಾರತೀಯರಿಗೆ ಅವರ ಆರ್ಥಿಕ ಸ್ಥಿತಿಯ ಕಾರಣದಿಂದ ಆರೋಗ್ಯ ಸೇವೆ ನಿರಾಕರಿಸಬಾರದು ಎಂಬುದನ್ನು ಖಚಿತಪಡಿಸುತ್ತಿದೆ. ದ್ವಿತೀಯ ಮತ್ತು ತೃತೀಯ ಆಸ್ಪತ್ರೆಯಲ್ಲಿ ಆರೈಕೆ ಪಡೆಯಲು ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವಾರ್ಷಿಕ ರಕ್ಷಣೆ ಒದಗಿಸುವುದರೊಂದಿಗೆ, ಎಬಿ-ಪಿಎಂಜೆಎವೈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದೇಶದ ಕೆಲವು ಅತ್ಯುತ್ತಮ ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ಪಡೆಯಲು ಮಾರ್ಗ ಒದಗಿಸಿದೆ.

ಈ ಯೋಜನೆಯಡಿ, 55 ಕೋಟಿಗೂ ಹೆಚ್ಚು ಜನರು ಆರೋಗ್ಯ ಸೇವೆಗಳಿಗೆ ಅರ್ಹರಾಗಿದ್ದಾರೆ, 7.5 ಕೋಟಿಗಿಂತ ಹೆಚ್ಚಿನ ಚಿಕಿತ್ಸೆಗಳನ್ನು 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದಲ್ಲಿ ಯಶಸ್ವಿಯಾಗಿ ಒದಗಿಸಲಾಗಿದೆ,ಇದೊಂದು ಗಮನಾರ್ಹ ಸಾಧನೆಯಾಗಿದೆ. ಯೋಜನೆಯ ವ್ಯಾಪ್ತಿ ಸಮಗ್ರವಾಗಿದ್ದು, 1900ಕ್ಕೂ ಹೆಚ್ಚು ವೈದ್ಯಕೀಯ ಕಾರ್ಯವಿಧಾನಗಳನ್ನು ಒಳಗೊಂಡಿದೆ, ಹೃದಯದ ಬೈಪಾಸ್‌ನಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಮತ್ತು ಹೃದಯ ಜಂಟಿ ಬದಲಿಗಳಿಂದ ಹಿಡಿದು ಕ್ಯಾನ್ಸರ್ ಮತ್ತು ಮೂತ್ರಪಿಂಡದಂತಹ ಕಾಯಿಲೆಗಳಿಗೆ ಚಿಕಿತ್ಸೆಗಳು ಸಿಗುತ್ತಿವೆ. ಇವುಗಳು ಈ ಹಿಂದೆ ಹಲವರಿಗೆ ತಲುಪಲು ಸಾಧ್ಯವಾಗದ ಚಿಕಿತ್ಸೆಗಳಾಗಿದ್ದವು, ಆದರೆ ಎಬಿ-ಪಿಎಂಜೆಎವೈ ಯೋಜನೆಯು ಅವುಗಳನ್ನು ಸುಲಭವಾಗಿ, ಕೈಗೆಟುಕುವ ಬೆಲೆಗೆ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಯೋಜನೆಯ ಜಾಲ ವಿಸ್ತರಣೆ, ವ್ಯವಸ್ಥೆಯ ಬಲವರ್ಧನೆ: ಎಬಿ-ಪಿಎಂಜೆಎವೈ ಯೋಜನೆಯ ವಿಶಿಷ್ಟ ಲಕ್ಷಣವೆಂದರೆ ಆರೋಗ್ಯ ಪೂರೈಕೆದಾರರ ಸದೃಢವಾದ ಜಾಲ ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಇಂದು 13,000 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಭಾರತದಾದ್ಯಂತ 29,000ಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಯಡಿ ನೋಂದಾಯಿಸಿಕೊಂಡಿವೆ. ಈ ಜಾಲವು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಮಾನವಾಗಿ ವ್ಯಾಪಿಸಿದೆ.

ದೇಶದ ಅತ್ಯಂತ ದೂರದ ಭಾಗಗಳಲ್ಲಿ ವಾಸಿಸುವವರೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪ್ರವೇಶಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಯೋಜನೆಯ “ವಿಶಿಷ್ಟ ಪೋರ್ಟೆಬಿಲಿಟಿ” ವೈಶಿಷ್ಟ್ಯವು ಫಲಾನುಭವಿಗಳು ಅವರು ಸೇರಿರುವ ರಾಜ್ಯದ ಜತೆಗೆ ದೇಶಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂಬುದನ್ನು ಖಚಿತಪಡಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಜೆ.ಪಿ. ನಡ್ಡಾ
ಆಯುಷ್ಮಾನ್ ಭಾರತ್ ಕುರಿತು ಕೇಂದ್ರದ ಮಹತ್ವದ ನಿರ್ಧಾರ: 70 ವರ್ಷ ಮೇಲ್ಪಟ್ಟ ವೃದ್ಧರಿಗೆ 5 ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ!

ಸಮಗ್ರ ಆರೋಗ್ಯ ಸಂರಕ್ಷಣೆಯ ಮೇಲೆ ಗಮನ: ಆಯುಷ್ಮಾನ್ ಭಾರತ್ ಕೇವಲ ಆಸ್ಪತ್ರೆಯ ಆರೈಕೆಯಲ್ಲ. ಎಬಿ-ಪಿಎಂಜೆಎವೈ ಯೋಜನೆಯ ಜತೆಗೆ ಸರ್ಕಾರವು, ಆಯುಷ್ಮಾನ್ ಆರೋಗ್ಯ ಮಂದಿರ(ಎಎಎಂ) ಸ್ಥಾಪನೆ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಈ ಆರೋಗ್ಯ ಕೇಂದ್ರಗಳು ಜನಸಂಖ್ಯೆಯಲ್ಲಿ ರೋಗದ ಒಟ್ಟಾರೆ ಹೊರೆ ಕಡಿಮೆ ಮಾಡುವ ಗುರಿ ಹೊಂದಿವೆ. ಇಲ್ಲಿಯವರೆಗೆ, ಭಾರತದಾದ್ಯಂತ 1.73 ಲಕ್ಷಕ್ಕೂ ಹೆಚ್ಚು AAM ಗಳನ್ನು ಸ್ಥಾಪಿಸಲಾಗಿದೆ. ಉಚಿತ ತಪಾಸಣೆ, ರೋಗ ಪತ್ತೆ ಮತ್ತು ಸಾಮಾನ್ಯ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಪರಿಸ್ಥಿತಿಗಳಿಗೆ ಔಷಧಿಗಳನ್ನು ಒದಗಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com