ನಾಗ್ಪುರ: ಸರ್ಕಾರ ಯಾವುದೇ ಇದ್ದರೂ ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವುದೂ ಒಂದು ಕಲೆ, ಹಲವು ರಾಜಕಾರಣಿಗಳಿಗೆ ಈ ಕಲೆ ಸಹಜವಾಗಿಯೇ ಬಂದಿರುತ್ತದೆ. ಈ ಪೈಕಿ ಮಹಾರಾಷ್ಟ್ರದ ರಾಮದಾಸ್ ಅಠಾವಳೆ ಸಹ ಒಬ್ಬರು.
ರಾಮ್ ದಾಸ್ ಅಠಾವಳೆ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅದೇನೆಂದರೆ, ನಮ್ಮ 4ನೇ ಅವಧಿಯ ಆಡಳಿತಕ್ಕೆ ಯಾವುದೇ ಗ್ಯಾರೆಂಟಿ ಇಲ್ಲದೇ ಇರಬಹುದು ಆದರೆ ರಾಮ್ ದಾಸ್ ಅಠಾವಳೆ ಕೇಂದ್ರ ಸಚಿವರಾಗುವುದು ಮಾತ್ರ ಗ್ಯಾರೆಂಟಿ ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಡ್ಕರಿ ತಮ್ಮ ಹೇಳಿಕೆಯನ್ನು ತಮಾಷೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಅಠಾವಳೆ ವೇದಿಕೆಯಲ್ಲಿದ್ದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ ಪಿಐ) ನಾಯಕರಾಗಿರುವ ಅಠಾವಳೆ, ಕೇಂದ್ರದಲ್ಲಿ 3 ಬಾರಿ ಸಚಿವರಾಗಿದ್ದು, ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರ್ಕಾರದ ಮಿತ್ರಪಕ್ಷವಾಗಿರುವ ತಮ್ಮ ಪಕ್ಷದ ಆರ್‌ಪಿಐ (ಎ) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 10 ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ಅಠಾವಳೆ ಹೇಳಿದ್ದಾರೆ. ನಾಗ್ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಠಾವಳೆ, ಆರ್‌ಪಿಐ-ಎ ತನ್ನ ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ ಮತ್ತು ವಿದರ್ಭದಲ್ಲಿ ಉತ್ತರ ನಾಗ್ಪುರ, ಉಮ್ರೆಡ್ (ನಾಗ್ಪುರ), ಯವತ್ಮಾಲ್‌ನ ಉಮರ್‌ಖೇಡ್ ಮತ್ತು ವಾಶಿಮ್ ಸೇರಿದಂತೆ ಮೂರರಿಂದ ನಾಲ್ಕು ಸ್ಥಾನಗಳಿಗೆ ಬೇಡಿಕೆ ಇಡಲಿದೆ ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಪಾಲ್ಘರ್‌ನಲ್ಲಿ ಮಾತನಾಡಿದ್ದ ಅಠಾವಳೆ, ಮಹಾಯುತಿ ಸರ್ಕಾರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರ್ಪಡೆಯಿಂದಾಗಿ, ಆರ್‌ಪಿಐ (ಎ) ಭರವಸೆಯ ಹೊರತಾಗಿಯೂ ರಾಜ್ಯದಲ್ಲಿ ಯಾವುದೇ ಸಚಿವ ಸ್ಥಾನವನ್ನು ಪಡೆದಿಲ್ಲ ಎಂದು ಹೇಳಿದ್ದರು.
Advertisement