ಸಿರ್ಸಾ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ನಾನು ಚೋರ್ ಅಲ್ಲ ಎಂಬುದು ನನ್ನ ಶತ್ರುಗಳಿಗೂ ಗೊತ್ತು ಎಂದು ಹೇಳಿದ್ದಾರೆ.
ಇಂದು ಹರಿಯಾಣದ ಸಿರ್ಸಾದ ರಾನಿಯಾ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹರ್ಪಿಂದರ್ ಸಿಂಗ್ ಪರವಾಗಿ ದೆಹಲಿ ಮಾಜಿ ಸಿಎಂ ರೋಡ್ ಶೋ ನಡೆಸಿದರು.
ರೋಡ್ ಶೋ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ನಾನು "ಚೋರ್"(ಕಳ್ಳ) ಎಂದು ಬಿಂಬಿಸಲು ನನ್ನನ್ನು ಬಂಧಿಸಲಾಗಿದೆ. ವಿನಾಕಾರಣ ಐದೂವರೆ ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. ಆದರೆ ನನ್ನ "ಶತ್ರುಗಳೂ" ಸಹ ನಾನು ಭ್ರಷ್ಟ ಅಲ್ಲ ಎಂದು ನಂಬುತ್ತಾರೆ ಎಂದರು.
"ನನ್ನ ತಪ್ಪೇನು? ಎಂದು ಪ್ರಶ್ನಿಸಿದ ಮಾಜಿ ಸಿಎಂ, 10 ವರ್ಷಗಳ ಕಾಲ ದೆಹಲಿ ಮುಖ್ಯಮಂತ್ರಿಯಾಗಿ, ಬಡವರ ಮಕ್ಕಳಿಗಾಗಿ ಉತ್ತಮ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿದ್ದು ನನ್ನ ತಪ್ಪೆ? ಮೊದಲು ದೆಹಲಿಯಲ್ಲಿ 7-8 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು. ಆದರೆ, ಈಗ ನಿರಂತರ ವಿದ್ಯುತ್ ನೀಡುತ್ತಿದ್ದೇವೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ನೀಡಿದ್ದು ನನ್ನ ತಪ್ಪು ಎಂದು ಕೇಜ್ರಿವಾಲ್ ಹೇಳಿದರು.
ನಮ್ಮ ಸರ್ಕಾರ ದೆಹಲಿಯಲ್ಲಿ ಉಚಿತ ವಿದ್ಯುತ್ ನೀಡುತ್ತಿದೆ. ನಾನು 'ಚೋರ್'(ಕಳ್ಳ) ಆಗಿದ್ದರೆ, ನನ್ನ ಜೇಬಿನಲ್ಲಿ 3,000 ಕೋಟಿ ರೂ. ಇರುತ್ತಿತ್ತು. "ನಾನು ಬಡವರ ಮಕ್ಕಳಿಗಾಗಿ ಉತ್ತಮ ಶಾಲೆಗಳನ್ನು ಸ್ಥಾಪಿಸಿದ್ದೇನೆ. ನಾನು ಭ್ರಷ್ಟಾಚಾರ ಮಾಡಿದ್ದರೆ, ನಾನು ಆ ಹಣವನ್ನು ನನ್ನ ಜೇಬಿಗೆ ಹಾಕಬಹುದಿತ್ತು" ಎಂದು ಕೇಜ್ರಿವಾಲ್ ಹೇಳಿದರು.
Advertisement