
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಫ್ಯೂಚರ್ಸ್ ಮತ್ತು ಆಪ್ಷನ್(ಎಫ್ & ಒ) ವಹಿವಾಟಿನಲ್ಲಿ ಶೇಕಡಾ 90 ರಷ್ಟು ಸಣ್ಣ ಹೂಡಿಕೆದಾರರು 1.8 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದರಲ್ಲಿ ಲಾಭ ಗಳಿಸಿದ "ದೊಡ್ಡವರ" ಹೆಸರುಗಳನ್ನು ಬಹಿರಂಗಪಡಿಸುವಂತೆ ಮಂಗಳವಾರ ಸೆಬಿಗೆ ಆಗ್ರಹಿಸಿದ್ದಾರೆ.
2024ರ ಹಣಕಾಸು ವರ್ಷದ ಶೇ. 91 ರಷ್ಟು ಅಥವಾ 73 ಲಕ್ಷಕ್ಕಿಂತ ಹೆಚ್ಚು, ವೈಯಕ್ತಿಕ ಸಣ್ಣ ವ್ಯಾಪಾರಿಗಳು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಮತ್ತು ಪ್ರತಿ ವ್ಯಕ್ತಿಗೆ ಸರಾಸರಿ 1.2 ಲಕ್ಷ ರೂಪಾಯಿ ನಿವ್ವಳ ನಷ್ಟವಾಗಿದೆ ಎಂದು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI) ನಡೆಸಿದ ಅಧ್ಯಯನ ವರದಿ ಸೋಮವಾರ ಬಹಿರಂಗಪಡಿಸಿದೆ.
ಇದಲ್ಲದೆ, ಹಣಕಾಸು ವರ್ಷ 2022 ರಿಂದ ಹಣಕಾಸು ವರ್ಷ 2024 ರವರೆಗಿನ ಮೂರು ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ವ್ಯಾಪಾರಿಗಳಲ್ಲಿ ಶೇ. 93 ರಷ್ಟು ವ್ಯಾಪಾರಿಗಳು ಸುಮಾರು 2 ಲಕ್ಷ ರೂಪಾಯಿಗಳಷ್ಟು ಸರಾಸರಿ ನಷ್ಟವನ್ನು ಅನುಭವಿಸಿದ್ದಾರೆ.ಈ ಅವಧಿಯಲ್ಲಿ ಅಂತಹ ವ್ಯಾಪಾರಿಗಳ ಒಟ್ಟು ನಷ್ಟವು 1.8 ಲಕ್ಷ ಕೋಟಿ ರೂಪಾಯಿ ಮೀರಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇದೇ ಅವಧಿಯಲ್ಲಿ F&O ವಹಿವಾಟು ನಡೆಸಿದವರ ಪೈಕಿ ಶೇ. 7.2 ರಷ್ಟು ಮಂದಿ ಮಾತ್ರ ಲಾಭ ಗಳಿಸಿದ್ದಾರೆ. ಶೇ. 1 ರಷ್ಟು ವ್ಯಾಪಾರಿಗಳು ಮಾತ್ರ ಎಲ್ಲ ವೆಚ್ಚಗಳ ಹೊಂದಾಣಿಕೆ ನಂತರ 1ಲಕ್ಷ ರೂಪಾಯಿಗೂ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, "ಅನಿಯಂತ್ರಿತ F&O ವ್ಯಾಪಾರವು ಕಳೆದ 5 ವರ್ಷಗಳಲ್ಲಿ 45 ಪಟ್ಟು ಹೆಚ್ಚಾಗಿದೆ. ಆದರೆ ಶೇ. 90 ರಷ್ಟು ಸಣ್ಣ ಹೂಡಿಕೆದಾರರು ಕಳೆದ ಮೂರು ವರ್ಷಗಳಲ್ಲಿ 1.8 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ" ಎಂದು ಹೇಳಿದ್ದಾರೆ.
"ಸಣ್ಣ ಹೂಡಿಕೆದಾರರ ವೆಚ್ಚದಲ್ಲಿ ಲಾಭ ಗಳಿಸುತ್ತಿರುವ ಕೊಲೆಗಡುಕ 'ದೊಡ್ಡವರ' ಹೆಸರನ್ನು ಬಹಿರಂಗಪಡಿಸಬೇಕು" ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಒತ್ತಾಯಿಸಿದ್ದಾರೆ.
Advertisement