ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು ಸುಮಾರು 15 ದೇಶಗಳ ಹಲವಾರು ಹಿರಿಯ ರಾಜತಾಂತ್ರಿಕರು ವೀಕ್ಷಕರಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದಾರೆ.
ಕಾಶ್ಮೀರಕ್ಕೆ ಪ್ರಯಾಣಿಸಿದ ಹಿರಿಯ ರಾಜತಾಂತ್ರಿಕರಲ್ಲಿ ಅಮೆರಿಕ, ಮೆಕ್ಸಿಕೊ, ಗಯಾನಾ, ದಕ್ಷಿಣ ಕೊರಿಯಾ, ಸೊಮಾಲಿಯಾ, ಪನಾಮ, ಸಿಂಗಾಪುರ, ನೈಜೀರಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ನಾರ್ವೆ, ತಾಂಜಾನಿಯಾ, ರುವಾಂಡಾ, ಅಲ್ಜೀರಿಯಾ, ಫಿಲಿಪೈನ್ಸ್ ಸೇರಿದ್ದಾರೆ.
ನಾವು ಇಲ್ಲಿರಲು ತುಂಬಾ ಸಂತೋಷಪಡುತ್ತೇವೆ. ಇದು ಅತ್ಯಂತ ಪ್ರಜಾಪ್ರಭುತ್ವ ಮತ್ತು ಆರೋಗ್ಯಕರವಾಗಿದೆ. ಹತ್ತು ವರ್ಷಗಳ ನಂತರ ಉತ್ಸಾಹ ಮತ್ತು ಕಾಶ್ಮೀರಿಗಳನ್ನು ನೋಡುವುದು ಅದ್ಭುತವಾಗಿದೆ ಎಂದು ಅಮೆರಿಕ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಜೋರ್ಗನ್ ಕೆ ಆಂಡ್ರ್ಯೂಸ್ ಹೇಳಿದರು.
ನಿಯೋಗವು ಓಂಪೋರಾ (ಬುದ್ಗಾಮ್) ನಲ್ಲಿನ ಮತದಾನ ಕೇಂದ್ರಗಳಿಗೆ ಭೇಟಿ ನೀಡಿತು. ನಂತರ ಲಾಲ್ ಚೌಕ್ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಮೀರ ಕಡಲ್ ಮತ್ತು ಚಿನಾರ್ ಬಾಗ್‌ನ ಎಸ್‌ಪಿ ಕಾಲೇಜಿನಲ್ಲಿ ಪರಿಶೀಲಿಸಿತು.
ಎಸ್‌ಪಿ ಕಾಲೇಜಿನಲ್ಲಿ ಪ್ರತಿನಿಧಿಗಳು ವಿಶೇಷ ಪಿಂಕ್ ಮತಗಟ್ಟೆಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಇದನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಈ ಹಲವಾರು ಮತಗಟ್ಟೆಗಳು ಅತ್ಯಂತ ಕಡಿಮೆ ಮತದಾನಕ್ಕೆ ಸಾಕ್ಷಿಯಾಗಿದ್ದವು. ಮೂರು ಹಂತಗಳ ಮೂಲಕ ನಡೆಯಲಿರುವ 90 ವಿಧಾನಸಭೆ ಕ್ಷೇತ್ರಕ್ಕೆ 9 ದಶಲಕ್ಷಕ್ಕೂ ಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ.
Advertisement