ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ಮರಳಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಆಗ್ರಹಿಸಿದ್ದಾರೆ.
ಕಂಗನಾ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ತಮ್ಮ ಸಂಸದೆಯ ಹೇಳಿಕೆಯನ್ನು ವಿರೋಧಿಸುತ್ತಾರೆಯೇ ಅಥವಾ ಇಲ್ಲವೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ಮರಳಿ ಜಾರಿಗೆ ತರುವ ಯಾವುದೇ ಪ್ರಯತ್ನವನ್ನು ಇಂಡಿಯಾ ಮೈತ್ರಿಕೂಟ ವಿರೋಧಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಮೂರು ಕೃಷಿ ಕಾನೂನುಗಳನ್ನು ಮರುಳಿ ಜಾರಿಗೊಳಿಸಲಾಗುತ್ತದೆಯೇ ಅಥವಾ ಇಲ್ಲವೇ? ನೀವು ಅಂತಹ ಪ್ರಯತ್ನ ಮಾಡಿದರೆ, ಇಂಡಿಯಾ ಬಣ ಒಟ್ಟಾಗಿ ಅದರ ವಿರುದ್ಧ ನಿಲ್ಲುತ್ತದೆ ಎಂದು ನಾನು ನಿಮಗೆ ಖಾತರಿ ನೀಡುತ್ತೇನೆ. ಕೃಷಿ ಕಾನೂನು ವಿರುದ್ಧದ ಹೋರಾಟದಲ್ಲಿ 700 ಜನ ಹುತಾತ್ಮರಾಗಿದ್ದಾರೆ. ಅವರನ್ನು ನೆನಪಿಸಿಕೊಳ್ಳಬೇಕು ಮತ್ತು ಗೌರವಿಸಬೇಕು" ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ.
ರಾಹುಲ್ ಗಾಂಧಿ ತಮ್ಮ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "700 ರೈತರ ಸಾವಿಗೆ ಮೋದಿ ಜಿ ಎರಡು ನಿಮಿಷ ಮೌನಾಚರಣೆ ಮಾಡಲಿಲ್ಲ. ನಾವು ಇದನ್ನು ಎಂದಿಗೂ ಮರೆಯುವುದಿಲ್ಲ" ಎಂದಿದ್ದಾರೆ.
"ಸರ್ಕಾರದ ನೀತಿಯನ್ನು ಯಾರು ನಿರ್ಧರಿಸುತ್ತಿದ್ದಾರೆ? ಬಿಜೆಪಿ ಸಂಸದರೇ ಅಥವಾ ಪ್ರಧಾನಿ ಮೋದಿಯೋ?" 700ಕ್ಕೂ ಹೆಚ್ಚು ರೈತರು, ಅದರಲ್ಲೂ ಹರಿಯಾಣ ಮತ್ತು ಪಂಜಾಬ್‌ನ ರೈತರು ಹುತಾತ್ಮರಾದ ನಂತರವೂ ಬಿಜೆಪಿಯವರಿಗೆ ತೃಪ್ತಿಯಾಗಿಲ್ಲ. ನಮ್ಮ ರೈತರ ವಿರುದ್ಧ ಬಿಜೆಪಿಯ ಯಾವುದೇ ಷಡ್ಯಂತ್ರ ಯಶಸ್ವಿಯಾಗಲು ಇಂಡಿಯಾ ಬಣ ಬಿಡುವುದಿಲ್ಲ” ಎಂದು ಕಾಂಗ್ರೆಸ್ ನಾಯಕ ಎಚ್ಚರಿಕೆ ನೀಡಿದ್ದಾರೆ.
Advertisement