
ಬೆಂಗಳೂರು: 32 ಮಿಲಿಯನ್ ಸಂಖ್ಯೆ ಇರುವ ಜಾಗತಿಕ ಸಾಗರೋತ್ತರ ಭಾರತೀಯ ಸಮುದಾಯಕ್ಕೆ ಭಾರತ ಸರ್ಕಾರ ಜಾರಿ ಮಾಡಿರುವ ಹೊಸ ನಿಯಮಗಳು ಬರಸಿಡಿಲಿನಂತೆ ಅಪ್ಪಳಿಸಿದೆ.
ಹೊಸ ನಿಯಮಗಳಲ್ಲಿ ಒಸಿಐ (ಭಾರತದ ಸಾಗರೋತ್ತರ ನಾಗರಿಕರು) ಜನತೆ ಪಡೆಯುತ್ತಿದ್ದ ಹಲವು ಸವಲತ್ತುಗಳಿಗೆ ಕತ್ತರಿ ಹಾಕಲಾಗಿದೆ. ಹಿಂದೊಮ್ಮೆ ಭಾರತೀಯ ನಾಗರಿಕರೊಂದಿಗೆ ಸರಿಸುಮಾರು ಸಮಾನ ಸ್ಥಾನಮಾನವನ್ನು ಅನುಭವಿಸುತ್ತಿದ್ದ ಅವರನ್ನು ಈಗ "ವಿದೇಶಿ ಪ್ರಜೆಗಳು" ಎಂದು ಮರುವರ್ಗೀಕರಿಸಲಾಗಿದೆ.
ಇದರಿಂದಾಗಿ ಅನಿವಾಸಿ ಭಾರತೀಯ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಒಸಿಐ ನಿಯಮಗಳ ಬದಲಾವಣೆಗಳೆಡೆಗೆ ಹಲವರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿರ್ಬಂಧಗಳು ಭದ್ರತಾ ಬೆದರಿಕೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿವೆ ಎಂದು ಕೆಲವರು ವಾದಿಸಿದರೆ, ಅವುಗಳು ಮಿತಿಮೀರಿದವೆಂದು ಮತ್ತೆ ಕೆಲವರು ಹೇಳಿದ್ದಾರೆ.
ಜರ್ಮನಿಯಲ್ಲಿರುವ ಎನ್‌ಆರ್‌ಐ ಆದಿತ್ಯ ಅರೋರಾ ಅವರ ಪತ್ನಿ ಮತ್ತು ಮಕ್ಕಳು ಇತ್ತೀಚೆಗೆ ವಿದೇಶಿ ಪ್ರಜೆಗಳಾಗಿದ್ದರು, "ನಾನು ನನ್ನ ಭಾರತೀಯ ಪೌರತ್ವವನ್ನು ತ್ಯಜಿಸಬೇಕಾಯಿತು, ಆದರೆ ಈ ಹೊಸ ಬದಲಾವಣೆಗಳಿಂದಾಗಿ, ನಾನು ನಿರುತ್ಸಾಹಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಅಮೇರಿಕಾದಲ್ಲಿ ವಾಸಿಸುತ್ತಿದ್ದ ಮತ್ತು ಈಗ ಬೆಂಗಳೂರಿಗೆ ಮರಳಿರುವ ಒಸಿಐ (ಭಾರತದ ಸಾಗರೋತ್ತರ ನಾಗರಿಕ) ಗುರುತನ್ನು ಹೊಂದಿರುವ ಸುಧೀರ್ ಜೆ ಮಾತನಾಡಿದ್ದು, “ನಮ್ಮನ್ನು ವಿದೇಶಿ ಪ್ರಜೆಗಳೆಂದು ಮರುವರ್ಗೀಕರಿಸುವುದು ಅಂತ್ಯವಿಲ್ಲದ ಅಧಿಕಾರಶಾಹಿ ಅಡೆತಡೆಗಳನ್ನು ಸೃಷ್ಟಿಸಿದೆ. ಪ್ರಯಾಣ, ವ್ಯಾಪಾರ ಅಥವಾ ಧಾರ್ಮಿಕ ಚಟುವಟಿಕೆಗಳಂತಹ ಸರಳ ವಿಷಯಗಳಿಗೆ ಈಗ ಅನುಮತಿಗಳ ಅಗತ್ಯವಿದೆ. ರಿಯಲ್ ಎಸ್ಟೇಟ್ ವಹಿವಾಟುಗಳನ್ನು ನಿರ್ಬಂಧಿಸಲಾಗಿದೆ. ಅವರು ನಮ್ಮ ಹೂಡಿಕೆಗಳನ್ನು ಸ್ವಾಗತಿಸಬೇಕಾದಾಗ ಸರ್ಕಾರವು ನಮ್ಮನ್ನು ದೂರ ತಳ್ಳುತ್ತಿದೆ ಎಂದು ಭಾಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅರಿಜೋನಾದ ಎನ್‌ಆರ್‌ಐ ಕುಂದುಕೊರತೆಗಳ ವೇದಿಕೆಯ ಸಂಯೋಜಕ ಸುಭಾಸ್ ಬಾಳಪ್ಪನವರ್, ಭಾರತದಲ್ಲಿ ಎನ್‌ಆರ್‌ಐ ಹೂಡಿಕೆಗಳನ್ನು ರಕ್ಷಿಸಲು ಕಾನೂನು ರಕ್ಷಣೆಗಾಗಿ ಕರೆ ನೀಡಿದ್ದಾರೆ.
ಕ್ಯಾಲಿಫೋರ್ನಿಯಾದ ಎನ್‌ಆರ್‌ಐ ಸಂದೀಪ್ ಎಸ್, ಓಸಿಐಗಳು ಭಾರತದ ಎಫ್‌ಡಿಐಗೆ ಪ್ರಮುಖ ಕೊಡುಗೆ ನೀಡುತ್ತವೆ ಎಂದು ಹೇಳಿದ್ದಾರೆ. “ನಾವು ಶತಕೋಟಿ ಸಕ್ರಮ ಹಣವನ್ನು ಮನೆಗೆ ಕಳುಹಿಸುತ್ತೇವೆ. ಇದು ಕೇವಲ ಭದ್ರತೆಯ ಬಗ್ಗೆ ಅಲ್ಲ, ಇದು ನಂಬಿಕೆಯ ಬಗ್ಗೆ. ಸರ್ಕಾರ ನಿಯಮಗಳನ್ನು ಬದಲಾಯಿಸುತ್ತಲೇ ಇದ್ದರೆ ಹೂಡಿಕೆದಾರರು ದೂರವಾಗುತ್ತಾರೆ,'' ಎಂದು ಹೇಳಿದ್ದಾರೆ.
ಒಸಿಐ ಸಮುದಾಯಕ್ಕೆ ದ್ರೋಹ ಮಾಡಲಾಗುತ್ತಿರುವ ಭಾವನೆ ಉಂಟಾಗಿದೆ. ವ್ಯಾಪಾರ ಹೂಡಿಕೆಯಿಂದ ವೈಯಕ್ತಿಕ ಸಂಬಂಧಗಳವರೆಗೆ, NRI ಗಳು ಮತ್ತು OCI ಗಳು ಭಾರತ ಮತ್ತು ಪ್ರಪಂಚದ ನಡುವಿನ ಸೇತುವೆಯಾಗಿದ್ದಾರೆ. ಅವರು ಅಡೆತಡೆಗಳನ್ನು ಎದುರಿಸುತ್ತಿದ್ದು, ಭಾರತ ಸರ್ಕಾರ ಈಗ ಅವರನ್ನು ಕೈಬಿಟ್ಟಿದೆಯೇ? ಎಂದು ಸಮುದಾಯ ಆಶ್ಚರ್ಯ ವ್ಯಕ್ತಪಡಿಸಿದೆ.
Advertisement