ಅಕ್ರಮ ಹಣ ವರ್ಗಾವಣೆ ಕೇಸು: ತಮಿಳು ನಾಡು ಮಾಜಿ ಸಚಿವ ಸೆಂಥಿಲ್ ಬಾಲಾಜಿಗೆ ಜಾಮೀನು

ಆಪ್ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿರುವುದನ್ನು ಉಲ್ಲೇಖಿಸಿದ ರೋಹಟಗಿ, ಈ ಹಂತದಲ್ಲಿ ಬಾಲಾಜಿಗೂ ಜಾಮೀನು ನೀಡಬೇಕು ಎಂದು ವಾದಿಸಿದರು.
ಸೆಂಥಿಲ್ ಬಾಲಾಜಿ(ಸಂಗ್ರಹ ಚಿತ್ರ)
ಸೆಂಥಿಲ್ ಬಾಲಾಜಿ(ಸಂಗ್ರಹ ಚಿತ್ರ)
Updated on

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜಾರಿ ನಿರ್ದೇಶನಾಲಯದಿಂದ(enforcement directorate) ಬಂಧನಕ್ಕೊಳಗಾಗಿದ್ದ ತಮಿಳುನಾಡು ಸರ್ಕಾರದ ಮಾಜಿ ಸಚಿವ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ಕಳೆದ ಆಗಸ್ಟ್ 12 ರಂದು ತೀರ್ಪನ್ನು ಕಾಯ್ದಿರಿಸಿ ಕೊನೆಗೂ ಇಂದು ಷರತ್ತುಬದ್ಧ ಜಾಮೀನು ವಿಧಿಸಿದೆ.

ಜಾಮೀನು ನೀಡುವಾಗ ಕೆಎ ನಜೀಬ್ ವರ್ಸಸ್ ಯುಒಐ ತೀರ್ಪು ಮತ್ತು ಇತರ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

ಸಾಲಿಸಿಟರ್ ಜನರಲ್ (SG) ತುಷಾರ್ ಮೆಹ್ತಾ ಮತ್ತು ಇಡಿಯನ್ನು ಪ್ರತಿನಿಧಿಸಿದ್ದ ಜೊಹೆಬ್ ಹೊಸೈನ್ ಹಾಗೂ ಸೆಂಥಿಲ್ ಬಾಲಾಜಿ ಪರ ವಾದ ಮಂಡಿಸಿದ ಮುಕುಲ್ ರೋಹಟಗಿ ಅವರು ಸಲ್ಲಿಸಿದ ವಾದಗಳ ವಿವರವಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಮುಕ್ತಾಯಗೊಳಿಸಿತ್ತು.

ವಿಚಾರಣೆ ವೇಳೆ ಎಸ್.ಜಿ.ಮೆಹ್ತಾ ಅವರು ಬಾಲಾಜಿ ಸಹೋದರ ತಲೆಮರೆಸಿಕೊಂಡಿದ್ದು, ಡಿಎಂಕೆ ನಾಯಕನ ಖಾತೆಗೆ ನಗದು ಜಮಾ ಆಗಿದ್ದು, ಸಾಕ್ಷಿಗಳು ಮತ್ತು ಸಂತ್ರಸ್ತರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ವಾದಿಸಿದರು.

ಕೇವಲ ಒಂದು ವರ್ಷದ ಸೆರೆವಾಸ ಮತ್ತು ವಿಚಾರಣೆಯ ವಿಳಂಬದಿಂದ ಅಪಾಯವುಂಟಾಗುವ ಸಾಧ್ಯತೆಯಿದ್ದು ಅವರನ್ನು ಬಿಡುಗಡೆ ಮಾಡಬಾರದು ಎಂದು ಮೆಹ್ತಾ ನ್ಯಾಯಾಲಯದ ಮುಂದೆ ವಾದಿಸಿದ್ದರು.

ಬಾಲಾಜಿ ಒಂದು ವರ್ಷದಿಂದ ಬಂಧನದಲ್ಲಿದ್ದರು ಎಂದು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ವಿಚಾರಣೆಯನ್ನು ಪ್ರಾರಂಭಿಸದಿದ್ದರೆ ವಿಚಾರಣೆಯನ್ನು ಮುಂದುವರಿಸುವುದಿಲ್ಲ ಎಂದು ಈ ಹಿಂದೆ ಟೀಕಿಸಿತ್ತು.

ಮತ್ತೊಂದೆಡೆ, ಬಾಲಾಜಿ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿ, ಜಾಮೀನು ಅರ್ಜಿಯಲ್ಲಿ ಈ ಎಲ್ಲವನ್ನು ತಿಳಿಸಲಾಗಿದೆ ಎಂದು ಹೇಳಿದರು. ದಯವಿಟ್ಟು ಮೊದಲು ನನಗೆ ಜಾಮೀನು ನೀಡಿ, ಇದನ್ನು ನಂತರ ನಿರ್ಧರಿಸಬಹುದು. ನಾನು ಇನ್ನು ಮುಂದೆ ಸಚಿವನಲ್ಲ, ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಬಾಲಾಜಿ ನ್ಯಾಯಾಲಯಕ್ಕೆ ತಿಳಿಸಿದರು.

ಆಪ್ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿರುವುದನ್ನು ಉಲ್ಲೇಖಿಸಿದ ರೋಹಟಗಿ, ಈ ಹಂತದಲ್ಲಿ ಬಾಲಾಜಿಗೂ ಜಾಮೀನು ನೀಡಬೇಕು ಎಂದು ವಾದಿಸಿದರು.

ವಿಚಾರಣೆ ವಿಳಂಬವಾಗಿದೆ. ಜಾಮೀನು ಇಲ್ಲಿ ಪ್ರಾಥಮಿಕ ವಿಷಯವಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಹಿಂದಿನ ಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಜಿ ಅವರನ್ನು ಕಳೆದ ವರ್ಷ ಜೂನ್ 14 ರಂದು ಇಡಿ ಬಂಧಿಸಿತ್ತು. ನಂತರ ಕಳೆದ ವರ್ಷ ಆಗಸ್ಟ್ 12 ರಂದು ಬಾಲಾಜಿ ವಿರುದ್ಧ 3,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.

ಇದಕ್ಕೆ ವ್ಯತಿರಿಕ್ತವಾಗಿ, ಈ ಪ್ರಕರಣದಲ್ಲಿ ಬಾಲಾಜಿ ಅವರು ನಿರಪರಾಧಿ ಎಂದು ದೃಢವಾಗಿ ಪ್ರತಿಪಾದಿಸಿದರು, ಅಕ್ಟೋಬರ್ 19 ರಂದು ಹೈಕೋರ್ಟ್ ಬಾಲಾಜಿ ಅವರ ಹಿಂದಿನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಸ್ಥಳೀಯ ನ್ಯಾಯಾಲಯವೂ ಅವರ ಜಾಮೀನು ಅರ್ಜಿಯನ್ನು ಮೂರು ಬಾರಿ ವಜಾಗೊಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com