ಕೇಂದ್ರ ಬಜೆಟ್-2024: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ; 10 ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟು!

ಕೇಂದ್ರ ಸರ್ಕಾರದ 2024-25 ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮುಕ್ತಾಯಗೊಂಡಿದೆ. 
ಆದಾಯ ತೆರಿಗೆ
ಆದಾಯ ತೆರಿಗೆ

ನವದೆಹಲಿ: ಕೇಂದ್ರ ಸರ್ಕಾರದ 2024-25 ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮುಕ್ತಾಯಗೊಂಡಿದೆ. ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಲವು ಮೂಲಸೌಕರ್ಯ ಯೋಜನೆಗಳ ಘೋಷಣೆಗಳು ಹಾಗೂ ಮಧ್ಯಮ ವರ್ಗಕ್ಕೆ ಒಂದಷ್ಟು ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ. 

ಆರೋಗ್ಯ ಹಾಗೂ ಮೂಲಸೌಕರ್ಯ, ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ಬಜೆಟ್ ನಲ್ಲಿ ನೀಡಲಾಗಿದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಆದಾಯ ತೆರಿಗೆ ಮಿತಿಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ.

7 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಲಭ್ಯತೆ ಮುಂದುವರೆದಿದ್ದು, ಹೊಸ ತೆರಿಗೆ ಪದ್ಧತಿಯನ್ನು ಮುಂದುವರೆಸಲಾಗಿದೆ. ಕಳೆದ 10 ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹ ದುಪ್ಪಟ್ಟಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಮಾಹಿತಿ ನೀಡಿದ್ದಾರೆ.

ಆದಾಯ ತೆರಿಗೆ ವಿನಾಯಿತಿಯಷ್ಟೇ ಅಲ್ಲದೇ, ಆಮದು ಸುಂಕ ಸೇರಿದಂತೆ ಇನ್ನಿತರ ತೆರಿಗೆಗಳನ್ನೂ ಸಹ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. 

ಇನ್ನು ಸಣ್ಣ ಆದಾಯ ಹಿಂತೆಗೆತ ತೆರಿಗೆಗೆ ಸಂಬಂಧಿಸಿದಂತೆ ಯೋಜನೆಯೊಂದನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. 

"ಬಾಕಿ ಉಳಿದಿರುವ ನೇರ ತೆರಿಗೆ ಬೇಡಿಕೆಗಳನ್ನು 2009-10 ರವರೆಗಿನ ಅವಧಿಗೆ ಸಂಬಂಧಿಸಿದಂತೆ ರೂ 25000 ವರೆಗೆ, 2013-14 ರವರೆಗಿನ ಅವಧಿಗೆ ಸಂಬಂಧಿಸಿದಂತೆ ರೂ 10,000 ವರೆಗೆ ಹಿಂಪಡೆಯಲಾಗುತ್ತದೆ. 1 ಕೋಟಿ ತೆರಿಗೆದಾರರು ಇದರ ಲಾಭ ಪಡೆಯಲಿದ್ದಾರೆ.

ಆದಾಯ ತೆರಿಗೆ ದರಗಳು ಈಗಾಗಲೇ ಕಡಿಮೆಯಾಗಿದ್ದು, ಸರ್ಕಾರವು ಪ್ರತಿ ವರ್ಷಕ್ಕೆ 2.4 ಲಕ್ಷ ರೂ.ನಿಂದ 7.5 ಲಕ್ಷ ರೂ.ಗೆ ಪ್ರಮಾಣಿತ ಕಡಿತವನ್ನು ಹೆಚ್ಚಿಸಿದೆ ಎಂದು ಸಚಿವರು ಹೇಳಿದರು.

2013-14ನೇ ಸಾಲಿನಲ್ಲಿ ತೆರಿಗೆ ಮರುಪಾವತಿ ಸರಾಸರಿ ಪ್ರಕ್ರಿಯೆ ಸಮಯವನ್ನು 93 ದಿನಗಳಿಂದ ಈ ವರ್ಷ ಕೇವಲ 10 ದಿನಗಳಿಗೆ ಇಳಿಸಲಾಗಿದೆ. ಇದರಿಂದಾಗಿ ಮರುಪಾವತಿಯನ್ನು ವೇಗವಾಗಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಇದಲ್ಲದೆ, ಕಳೆದ 10 ವರ್ಷಗಳಲ್ಲಿ ತೆರಿಗೆ ಮರುಪಾವತಿಯನ್ನು ಸಲ್ಲಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಾಗಿದೆ ಎಂದು ಸೀತಾರಾಮನ್ ಹೇಳಿದರು. ಆರ್ಥಿಕ ವರ್ಷ 2018 ರಿಂದ GSTಯ ತೆರಿಗೆ ಮೂಲ ದ್ವಿಗುಣಗೊಂಡಿದೆ. ಸರಾಸರಿ ಮಾಸಿಕ ಜಿಎಸ್‌ಟಿ ಕೂಡ ದ್ವಿಗುಣಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com