ಶಿವಸೇನಾ ನಾಯಕನ ಮೇಲೆ ಗುಂಡಿನ ದಾಳಿ: ಬಿಜೆಪಿ ಶಾಸಕನ ಬಂಧನ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕೇಸ್ ದಾಖಲು

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್ ಠಾಣೆಯೊಳಗೆ ಶಿವಸೇನೆ ಮುಖಂಡನ ಮೇಲೆ ಗುಂಡು ಹಾರಿಸಿದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ವಿರುದ್ಧ ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು..
ಗಣಪತ್ ಗಾಯಕ್ವಾಡ್
ಗಣಪತ್ ಗಾಯಕ್ವಾಡ್

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸ್ ಠಾಣೆಯೊಳಗೆ ಶಿವಸೇನೆ ಮುಖಂಡನ ಮೇಲೆ ಗುಂಡು ಹಾರಿಸಿದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ವಿರುದ್ಧ ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಗಾಯಕ್ವಾಡ್ ಹಾಗೂ ಇತರ ಜನ ಜನವರಿ 31 ರಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಶಾಸಕರ ವಿರುದ್ಧ ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಶಾಸಕ ಗಣಪತ್ ಗಾಯಕ್ವಾಡ್ ಅವರು ಭೂ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುವಾಗ ತಮ್ಮದೇ ಮಿತ್ರ ಪಕ್ಷದ ಮಹೇಶ್ ಗಾಯಕ್‌ವಾಡ್ ಅವರ ಮೇಲೆ ಗುಂಡು ಹಾರಿಸಿದ್ದರು. ಸ್ಥಳದಲ್ಲಿಯೇ ಅವರನ್ನು ಬಂಧಿಸಲಾಗಿದ್ದು, ಈ ದಾಳಿಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಲ್ಯಾಣದ ಪೂರ್ವ ಕಲ್ಯಾಣ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಗಾಯಕ್ವಾಡ್ ವಿರುದ್ಧ ಕೊಲೆ ಯತ್ನ ಮತ್ತು ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.

ಗುಂಡಿನ ದಾಳಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುಧಾಕರ್ ಪಥಾರೆ ಅವರು ತಿಳಿಸಿದ್ದಾರೆ.

ಶನಿವಾರ ದ್ವಾರಲಿ ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಗಣಪತ್ ಗಾಯಕ್ವಾಡ್ ಮತ್ತು ಇತರ ಏಳು ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿಲ್ ಲೈನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರೂ ಕಡೆಯವರು ಉಲ್ಲಾಸ ನಗರದಲ್ಲಿನ ಹಿಲ್ ಲೈನ್ ಪೊಲೀಸ್ ಠಾಣೆಗೆ ತೆರಳಿದ್ದರು. ಹಿರಿಯ ಇನ್‌ಸ್ಪೆಕ್ಟರ್ ಅವರ ಚೇಂಬರ್‌ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಗಣಪತ್ ಮತ್ತು ಮಹೇಶ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಆಗ ಕೋಪಗೊಂಡ ಗಣಪತ್, ತಮ್ಮ ಪಿಸ್ತೂಲು ತೆಗೆದು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಮಹೇಶ್ ಮತ್ತು ಅವರ ಒಬ್ಬ ಬೆಂಬಲಿಗನಿಗೆ ಗಾಯಗಳಾಗಿವೆ. ಅವರಿಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com