ಉತ್ತರಾಖಂಡದಲ್ಲಿ ಹಿಂಸಾಚಾರ: ಮದರಸಾ ಧ್ವಂಸ ಬಳಿಕ ಕಿಡಿಗೇಡಿಗಳಿಂದ ವಾಹನಗಳಿಗೆ ಬೆಂಕಿ; ಕಂಡಲ್ಲಿ ಗುಂಡಿಗೆ ಆದೇಶ!

ಅಕ್ರಮ ಮದರಸಾ ಧ್ವಂಸ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಮದರಸಾವನ್ನು ಕೆಡವಿದ ನಂತರ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಉತ್ತರಾಖಂಡ ಹಿಂಸಾಚಾರ
ಉತ್ತರಾಖಂಡ ಹಿಂಸಾಚಾರ
Updated on

ಹಲ್ದ್ವಾನಿ(ಉತ್ತರಾಖಂಡ): ಅಕ್ರಮ ಮದರಸಾ ಧ್ವಂಸ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಮದರಸಾವನ್ನು ಕೆಡವಿದ ನಂತರ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಪ್ರದೇಶದಲ್ಲಿ ಬನ್‌ಭುಲ್‌ಪುರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮದರಸಾ ಮತ್ತು ಭೂಗತ ಮಸೀದಿಯಂತಹ ಕಟ್ಟಡವನ್ನು ಕೆಡವಲಾದ ನಂತರ ಕೋಮು ಉದ್ವಿಗ್ನತೆ ಹರಡಿತು.

ಅಧಿಕಾರಿಗಳ ಪ್ರಕಾರ, ನೈನಿತಾಲ್ ಜಿಲ್ಲಾಡಳಿತ ಮತ್ತು ಸ್ಥಳೀಯ ನಾಗರಿಕ ಅಧಿಕಾರಿಗಳ ಜಂಟಿ ತಂಡವು ನಜುಲ್ ಭೂಮಿಯಲ್ಲಿ ಮದರಸಾವನ್ನು ನೆಲಸಮವನ್ನು ಮಾಡಿತ್ತು. ಇದರಿಂದ ಕೋಪಗೊಂಡ ಸ್ಥಳೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ವೇಗವಾಗಿ ಹದಗೆಟ್ಟಿದ್ದು ಸ್ಥಳೀಯರು ನಡೆಸಿದ ಕಲ್ಲು ತೂರಾಟದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತವು ಪ್ರಕ್ಷುಬ್ಧ ಪ್ರದೇಶವಾದ ಬಂಭುಲ್ಪುರ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಿದೆ. ಅಲ್ಲಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್ ಮಾಡಲಾಗಿದೆ. ಅಶಿಸ್ತಿನ ಅಂಶಗಳ ವಿರುದ್ಧ ಮಾರಣಾಂತಿಕ ಬಲವನ್ನು ಬಳಸಲು ಮತ್ತು ಗಲಭೆಕೋರರನ್ನು ಮಟ್ಟ ಹಾಕಲು ಕಂಡಲ್ಲಿ ಗುಂಡು ಹಾರಿಸಲು ಕಾನೂನು ಜಾರಿ ಅಧಿಕಾರವನ್ನು ರಾಜ್ಯ ಸರ್ಕಾರವು ಸಹ ಹೊರಡಿಸಿದೆ. 

ಸಿಎಂ ಧಾಮಿಯಿಂದ ಪರಿಶೀಲನಾ ಸಭೆ
ತೀವ್ರಗೊಳ್ಳುತ್ತಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತುರ್ತು ಸಭೆಯನ್ನು ಕರೆದಿದ್ದಾರೆ. ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ, ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಮತ್ತು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಎಪಿ ಅಂಶುಮಾನ್ ಸಭೆಯಲ್ಲಿ ಉಪಸ್ಥಿತರಿದ್ದರು. ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಆಡಳಿತದ ಕ್ರಮವು ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಧಾಮಿ ಹೇಳಿದರು.

ಅಲ್ಲಿ ಸಮಾಜ ವಿರೋಧಿಗಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಆಡಳಿತ ಅಧಿಕಾರಿಗಳು ಗಾಯಗೊಂಡಿದ್ದಾರೆ. ಪೊಲೀಸ್ ಮತ್ತು ಕೇಂದ್ರ ಪಡೆಗಳ ಹೆಚ್ಚುವರಿ ಕಂಪನಿಗಳನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಎಲ್ಲರೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇವೆ. ಕರ್ಫ್ಯೂ ಜಾರಿಯಲ್ಲಿದೆ. ದಂಗೆಕೋರರು ಮತ್ತು ಬೆಂಕಿ ಹಚ್ಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಥಳೀಯರಿಗೆ ಪೂರ್ವ ಮಾಹಿತಿ ನೀಡಿದ ನಂತರ ಮದರಸಾವನ್ನು ಕೆಡವಲಾಯಿತು ಎಂದು ಎಸ್‌ಎಸ್‌ಪಿ ಪ್ರಹ್ಲಾದ್ ಮೀನಾ ತಿಳಿಸಿದ್ದಾರೆ. ಮುನ್ಸಿಪಲ್ ಕಮಿಷನರ್ ಪಂಕಜ್ ಉಪಾಧ್ಯಾಯ, ಸಿಟಿ ಮ್ಯಾಜಿಸ್ಟ್ರೇಟ್ ರಿಚಾ ಸಿಂಗ್, ಎಸ್‌ಡಿಎಂ ಪಾರಿತೋಷ್ ವರ್ಮಾ ಅವರ ಸಮ್ಮುಖದಲ್ಲಿ ಕೆಡವಲು ಕ್ರಮ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಹೇಳಿದ್ದಾರೆ. ಅನೇಕ ಪೊಲೀಸ್ ಸಿಬ್ಬಂದಿ ಮತ್ತು ಆಡಳಿತ ಅಧಿಕಾರಿಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ. ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ. ಮುಂದಿನ ದಿನಗಳಲ್ಲಿ ಘಟನೆಯ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com