ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕಮಾಂಡೋ ಹತ್ಯೆ, ಕೇಂದ್ರದಿಂದ ಹೆಲಿಕಾಪ್ಟರ್‌ಗಳನ್ನು ಕೇಳಿದ ರಾಜ್ಯ ಸರ್ಕಾರ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ತುರ್ತು ಅವಶ್ಯಕತೆಗಳನ್ನು ಪೂರೈಸಲು ಹೆಲಿಕಾಪ್ಟರ್‌ಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ತುರ್ತು ಅವಶ್ಯಕತೆಗಳನ್ನು ಪೂರೈಸಲು ಹೆಲಿಕಾಪ್ಟರ್‌ಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮಣಿಪುರ ಸರ್ಕಾರ ಬುಧವಾರ ಮನವಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಮಣಿಪುರ ಗೃಹ ಇಲಾಖೆ ಆಯುಕ್ತ ಟಿ ರಂಜಿತ್ ಸಿಂಗ್ ಅವರು ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ(ಪೊಲೀಸ್ II ವಿಭಾಗ)ಗೆ ಪತ್ರ ಬರೆದಿದ್ದು, "ಗಡಿ ಭಾಗದ ಪಟ್ಟಣವಾದ ಮೊರೆಹ್‌ನಲ್ಲಿ ನಿರಂತರ ಗುಂಡಿನ ಚಕಮಕಿ ನಡೆಯುತ್ತಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕಳವಳಕಾರಿಯಾಗಿದೆ. ಇಂದು ಬೆಳಗ್ಗೆ ಒಬ್ಬ IRB ಸಿಬ್ಬಂದಿ ಸಾವಿಗೂ ಈ ಗುಂಡಿನ ಚಕಮಕಿ ಕಾರಣವಾಗಿದೆ ಎಂದು ಹೇಳಿದ್ದಾರೆ.

"ಮೊರೆಹ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ವೈದ್ಯಕೀಯ ತುರ್ತುಸ್ಥಿತಿ ಯಾವಾಗ ಬೇಕಾದರೂ ಉದ್ಭವಿಸಬಹುದು" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬುಧವಾರ ಬೆಳಗ್ಗೆ ಮೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಶಂಕಿತ ಕುಕಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದರಿಂದ ಮಣಿಪುರ ಸರ್ಕಾರ, ಕನಿಷ್ಠ ಏಳು ದಿನಗಳ ಕಾಲ ಹೆಲಿಕಾಪ್ಟರ್‌ಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದೆ.

ಮೊರೆಹ್, ರಾಜಧಾನಿ ಇಂಫಾಲ್‌ನಿಂದ 105 ಕಿಮೀ ದೂರದಲ್ಲಿದೆ. ತೆಂಗ್ನೌಪಾಲ್ ಜಿಲ್ಲೆಯಲ್ಲಿನ ಅಸ್ಥಿರ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಕುಕಿ ಉಗ್ರಗಾಮಿಗಳ ಹೊಂಚುದಾಳಿ, ಬುಡಕಟ್ಟು ಮಹಿಳೆಯರ ಹೆದ್ದಾರಿ ದಿಗ್ಬಂಧನದ ಬೆದರಿಕೆಯಿಂದಾಗಿ, ಗಾಯಗೊಂಡ ಸಿಬ್ಬಂದಿಯನ್ನು ಏರ್‌ಲಿಫ್ಟ್ ಮಾಡಲು ಹೆಲಿಕಾಪ್ಟರ್ ಸೇವೆ ಏಕೈಕ ಅನುಕೂಲಕರ ಮಾರ್ಗವಾಗಿದೆ.

ಭದ್ರತಾ ಪಡೆಗಳು ಮತ್ತು ಕುಕಿ ಉಗ್ರರ ನಡುವೆ ಇಂದು ಬೆಳಗ್ಗೆಯಿಂದ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಮಣಿಪುರ ಪೊಲೀಸ್ ಕಮಾಂಡೊ ಮೃತಪಟ್ಟಿದ್ದಾರೆ. ಮೃತ ಕಮಾಂಡೋನನ್ನು ಮೊರೆಹ್‌ನ ರಾಜ್ಯ ಪೊಲೀಸ್ ಕಮಾಂಡೊದ ಐಆರ್‌ಬಿ ಸಿಬ್ಬಂದಿ ವಾಂಗ್‌ಖೇಮ್ ಸೋಮೊರ್ಜಿತ್ ಎಂದು ಗುರುತಿಸಲಾಗಿದೆ. ಸೊಮೊರ್ಜಿತ್ ಇಂಫಾಲ ಪಶ್ಚಿಮ ಜಿಲ್ಲೆಯ ಮಾಲೊಮ್ ಮೂಲದವರಾಗಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆದಿವಾಸಿಗಳನ್ನು ಬಂಧಿಸಿದ ಬಳಿಕ ಕುಕಿ ಸಮುದಾಯವು ಬೃಹತ್ ಪ್ರತಿಭಟನೆಗಳನ್ನು ಆರಂಭಿಸಿದ್ದು, ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com