ಮಹಾರಾಷ್ಟ್ರ: ಅಯೋಧ್ಯೆ ಪರ ವಾಹನ ರ್ಯಾಲಿ ಮೇಲೆ ದಾಳಿ; 13 ಜನರ ಬಂಧನ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಮುನ್ನಾದಿನ ಮುಂಬೈಗೆ ಹೊಂದಿಕೊಂಡಿರುವ ಮೀರಾ ಭಾಯಂದರ್ ಪ್ರದೇಶದಲ್ಲಿ ವಾಹನ ರ್ಯಾಲಿ ನಡೆಸುತ್ತಿದ್ದ ಜನರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ 13 ಜನರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಮುನ್ನಾದಿನ ಮುಂಬೈಗೆ ಹೊಂದಿಕೊಂಡಿರುವ ಮೀರಾ ಭಾಯಂದರ್ ಪ್ರದೇಶದಲ್ಲಿ ವಾಹನ ರ್ಯಾಲಿ ನಡೆಸುತ್ತಿದ್ದ ಜನರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ 13 ಜನರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಹೇಳಿದ್ದಾರೆ.

ಭಾನುವಾರ ರಾತ್ರಿ 10.30 ರ ಸುಮಾರಿಗೆ ನಯಾ ನಗರ ಪ್ರದೇಶದಲ್ಲಿ ವಾಹನ ರ್ಯಾಲಿ ನಡೆಸುತ್ತಿದ್ದ ವೇಳೆ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಮೂರು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ 10 ರಿಂದ 12 ಜನ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಕೆಲವರು ಪಟಾಕಿ ಸಿಡಿಸಿದಾಗ ಜನರ ಗುಂಪೊಂದು ಮನೆಯಿಂದ ಹೊರಬಂದು ರ್ಯಾಲಿಯಲ್ಲಿ ಭಾಗವಹಿಸಿದ್ದವರನ್ನು ದೊಣ್ಣೆಗಳಿಂದ ಥಳಿಸಿದ್ದು, ವಾಹನಗಳ ಮೇಲೂ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.

"ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ದಾಳಿಕೋರರನ್ನು ಚದುರಿಸಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ದಾಳಿಕೋರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307(ಕೊಲೆ ಯತ್ನ) ಮತ್ತು ಇತರ ಅಪರಾಧಗಳ ಅಡಿಯಲ್ಲಿ ನಯಾ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ. ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಅದರಲ್ಲಿ ಭಾಗಿಯಾಗಿರುವ ಹೆಚ್ಚಿನ ಜನರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಫಡ್ನವಿಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com