
ನವದೆಹಲಿ: ಇಂದು (ಏ.02) ರಂದು ನಡೆದ ಲೋಕಸಭೆ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಸ್ ಪಿ ಮುಖಂಡ ಅಖಿಲೇಶ್ ಯಾದವ್ ನಡುವೆ ಸ್ವಾರಸ್ಯಕರ ಮಾತಿನ ಚಕಮಕಿ ನಡೆದಿದೆ.
ಬಿಜೆಪಿಯ ಆಂತರಿಕ ವಿಷಯವಾಗಿ ಮಾತನಾಡಿದ ಅಖಿಲೇಶ್ ಯಾದವ್ ಗೆ ಅಮಿತ್ ಶಾ ಉತ್ತರ ನೀಡಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಬಿಜೆಪಿಯ ಹಾಲಿ ರಾಷ್ಟ್ರಾಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು, ಇನ್ನೂ ಹೊಸ ಅಧ್ಯಕ್ಷರ ನೇಮಕ ಆಗದೇ ಇರುವ ಬಗ್ಗೆ ಅಖಿಲೇಶ್ ಯಾದವ್ ಸದನದಲ್ಲಿ ಲಘು ಧಾಟಿಯಲ್ಲಿ ಪ್ರಶ್ನಿಸಿದರು.
ವಕ್ಫ್ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ಮಾತನಾಡಿದ ಅಖಿಲೇಶ್ ಯಾದವ್ ಬಿಜೆಪಿಯಲ್ಲಿ ಯಾರು ಅತ್ಯಂತ ಕೆಟ್ಟ ಹಿಂದೂ ಎಂಬ ಬಗ್ಗೆ ಪೈಪೋಟಿ ನಡೆಯುತ್ತಿದ್ದು, ಆಂತರಿಕ ಕಲಹವಿದೆ. ನಾನು ಇದನ್ನು ಸುಮ್ಮನೆ ಹೇಳುತ್ತಿಲ್ಲ. ಜಗತ್ತಿಕ ಅತಿ ದೊಡ್ಡ ಪಕ್ಷವೆಂದು ಹೇಳಿಕೊಳ್ಳುವ ಪಕ್ಷಕ್ಕೆ ಇನ್ನೂ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು. ಅಖಿಲೇಶ್ ಯಾದವ್ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅಮಿತ್ ಶಾ, ಅಖಿಲೇಶ್ ಯಾದವ್ ಅವರು ನಗುತ್ತಲೇ ಏನನ್ನೋ ಹೇಳಿದ್ದಾರೆ. ಅದಕ್ಕೆ ನಗುತ್ತಲೇ ಉತ್ತರ ಕೊಡುತ್ತೇನೆ ಎಂದು ಮಾತು ಪ್ರಾರಂಭಿಸಿದರು.
ವಿಪಕ್ಷ ಸದಸ್ಯರ ಬೆಂಚ್ ನತ್ತ ಕೈ ತೋರಿಸಿ ಮಾತು ಆರಂಭಿಸಿದ ಅಮಿತ್ ಶಾ, "ಅಲ್ಲಿರುವ ಎಲ್ಲಾ ಪಕ್ಷಗಳು ತಮ್ಮ ಕುಟುಂಬದ ಐದು ಜನರಲ್ಲಿ ತಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ನಾವು ಒಂದು ಪ್ರಕ್ರಿಯೆಯನ್ನು ಅನುಸರಿಸಬೇಕು ಮತ್ತು 12-13 ಕೋಟಿ ಸದಸ್ಯರಿಂದ ಮುಖ್ಯಸ್ಥರನ್ನು ಆಯ್ಕೆ ಮಾಡಬೇಕು. ಆದ್ದರಿಂದ ಇದು ಸಮಯ ತೆಗೆದುಕೊಳ್ಳುತ್ತದೆ" ಎಂದು ಅಮ್ಮಿತ್ ಶಾ ಹೇಳಿದರು. ಈ ಹೇಳಿಕೆ ನೀಡುತ್ತಿದ್ದಂತೆಯೇ ಬಿಜೆಪಿ ಸಂಸದರು ಕರತಾಡನ ಮಾಡುವ ಮೂಲಕ ಅಮಿತ್ ಶಾಗೆ ಬೆಂಬಲ ಸೂಚಿಸಿದರು.
ಯಾದವ್ ಅವರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, "ನೀವು ಸಮಯ ತೆಗೆದುಕೊಳ್ಳುವುದಿಲ್ಲ. ನಾನು ನಿಮಗೆ ಹೇಳುತ್ತಿದ್ದೇನೆ, ನೀವು 25 ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿರುತ್ತೀರಿ. ಯಾರೂ ಬದಲಾಗಲು ಸಾಧ್ಯವಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ಅವರ ಈ ಹೇಳಿಕೆಯಿಂದ ಮುಜುಗರಕ್ಕೆ ಒಳಗಾದ ಅಖಿಲೇಶ್ ಯಾದವ್ ಒಂದು ಹಂತದಲ್ಲಿ ಕೈ ಮುಗಿದು ನಗುತ್ತಾ ಕುಳಿತ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
Advertisement