
ನವದೆಹಲಿ: ತೀವ್ರ ವಿರೋಧದ ನಡುವೆ ಲೋಕಸಭೆಯಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ-2025ನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದರು.
ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡಿಸಿ ಮಾತನಾಡಿದ ರಿಜಿಜು, ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ನಾವು ರಾಜ್ಯ ಸರ್ಕಾರಗಳು, ಅಲ್ಪಸಂಖ್ಯಾತ ಆಯೋಗಗಳು ಮತ್ತು ವಕ್ಫ್ ಮಂಡಳಿಗಳೊಂದಿಗೆ ಸಮಾಲೋಚಿಸಿದ್ದೇವೆ.
ರಾಜ್ಯಸಭೆ ಮತ್ತು ಲೋಕಸಭೆ ಎರಡರ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಂಸದೀಯ ಸಮಿತಿ (JPC)ಯನ್ನು ರಚಿಸಲಾಯಿತು, ವ್ಯಾಪಕ ಚರ್ಚೆಗಳ ನಂತರ ಮಸೂದೆಯನ್ನು ನಿನ್ನೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು ಎಂದರು. ಭಾರತದಲ್ಲಿ ಅಪಾರ ಪ್ರಮಾಣದ ವಕ್ಫ್ ಆಸ್ತಿಗಳನ್ನು ಸಚಿವರು ಎತ್ತಿ ತೋರಿಸಿದರು.
ಇಂದು ದೇಶದಲ್ಲಿ 8.72 ಲಕ್ಷ ವಕ್ಫ್ ಆಸ್ತಿಗಳಿವೆ. 2006 ರಲ್ಲಿ, ಸಾಚಾರ್ ಸಮಿತಿಯು 4.9 ಲಕ್ಷ ವಕ್ಫ್ ಆಸ್ತಿಗಳಿಂದ 12,000 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂದು ಆದಾಯವನ್ನು ಅಂದಾಜಿಸಿದೆ. ಈ ಆಸ್ತಿಗಳಿಂದ ಅಪಾರ ಪ್ರಮಾಣದ ಆದಾಯ ಬರುತ್ತದೆ ಎಂದರು.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವಂತೆ ಅವರು ಒತ್ತಾಯಿಸಿದರು. ನಿನ್ನೆ ಲೋಕಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಮತ್ತು ವಿರೋಧ ಪಕ್ಷದ ಇಂಡಿಯಾ ಒಕ್ಕೂಟ ನಡುವೆ 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಬಿಸಿಬಿಸಿ ಚರ್ಚೆ ನಂತರ ವಕ್ಫ್ (ತಿದ್ದುಪಡಿ) ಮಸೂದೆ, 2025 ನ್ನು ಅಂಗೀಕರಿಸಲಾಯಿತು. ಮಸೂದೆ ಪರವಾಗಿ 288 ಮತ್ತು ವಿರುದ್ಧವಾಗಿ 232 ಮತಗಳು ಚಲಾವಣೆಯಾದವು.
Advertisement