
ನವದೆಹಲಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ ಶಾಸನಬದ್ಧ ನಿರ್ಣಯವನ್ನು ಗುರುವಾರ ಬೆಳಗ್ಗೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಎಲ್ಲಾ ಸಂಸದರು ಪಕ್ಷಾತೀತವಾಗಿ ಈ ನಿರ್ಣಯವನ್ನು ಬೆಂಬಲಿಸಿದರು. ಆದರೆ ಮಣಿಪುರದಲ್ಲಿನ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಸಣ್ಣ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪ್ರಕ್ಷುಬ್ಧ ಈಶಾನ್ಯ ರಾಜ್ಯದಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಸರ್ಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಇದೇ ವೇಳೆ ಕಳೆದ ನಾಲ್ಕು ತಿಂಗಳುಗಳಲ್ಲಿ ಮಣಿಪುರದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಶಾಂತಿ ಸ್ಥಾಪಿಸಲು ಮೈತೈ ಮತ್ತು ಕುಕಿ ಸಮುದಾಯಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅಮಿತ್ ಶಾ ಲೋಕಸಭೆಗೆ ತಿಳಿಸಿದರು.
"ಮಣಿಪುರದಲ್ಲಿ ಸಾಮಾನ್ಯವಾಗಿ ಪರಿಸ್ಥಿತಿ ಶಾಂತಿಯುತವಾಗಿದೆ. ಜನರು ಶಿಬಿರಗಳಲ್ಲಿ ಇರುವವರೆಗೆ, ಪರಿಸ್ಥಿತಿ ತೃಪ್ತಿಕರವಾಗಿದೆ ಎಂದು ನಾನು ಹೇಳುವುದಿಲ್ಲ. ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸಲು ಸರ್ಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಅವರು ಹೇಳಿದರು.
ಮೇ 2023 ರಲ್ಲಿ ಪ್ರಾರಂಭವಾದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 260 ಜನರು ಸಾವನ್ನಪ್ಪಿದ್ದಾರೆ ಮತ್ತು ಅವರಲ್ಲಿ ಶೇಕಡಾ 80 ರಷ್ಟು ಜನ ಹಿಂಸಾಚಾರ ಆರಂಭವಾದ ಒಂದೇ ತಿಂಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
Advertisement