
ನವದೆಹಲಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದ ರಫ್ತುಗಳ ಮೇಲಿನ ಅಮೆರಿಕದ ಸುಂಕ ಹೇರಿಕೆಯಿಂದ ದೇಶದ ಆರ್ಥಿಕತೆ ನಾಶವಾಗುತ್ತದೆ ಎಂದು ಗುರುವಾರ ಎಚ್ಚರಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚೀನಾ ಭಾರತದ 4,000 ಚದರ ಕಿಲೋಮೀಟರ್ ಪ್ರದೇಶವನ್ನು ವಶಪಡಿಸಿಕೊಂಡಿದೆ ಮತ್ತು ಅಮೆರಿಕ ವಿಧಿಸುವ ಆಮದು ಸುಂಕಗಳು ಭಾರತದ ಆರ್ಥಿಕತೆಯನ್ನು "ಸಂಪೂರ್ಣವಾಗಿ ನಾಶಪಡಿಸುತ್ತದೆ". ಈ ವಿಷಯಗಳ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಅಮೆರಿಕ ತನ್ನ ಹೊಸ ಪರಸ್ಪರ ವ್ಯಾಪಾರ ಕ್ರಮಗಳ ಅಡಿಯಲ್ಲಿ ಭಾರತೀಯ ರಫ್ತಿನ ಮೇಲೆ ಶೇ. 27 ಸುಂಕ ವಿಧಿಸಿಲು ನಿರ್ಧರಿಸಿದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಗಡಿ ಪರಿಸ್ಥಿತಿಯನ್ನು ಗಮನಿಸಿದರೆ ಚೀನಾದೊಂದಿಗಿನ ರಾಜತಾಂತ್ರಿಕ ಬಾಂಧ್ಯವದ 75ನೇ ವರ್ಷಾಚರಣೆ ಸೂಕ್ತವಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
"ನಮ್ಮ ಭೂಪ್ರದೇಶದ 4,000 ಚದರ ಕಿಲೋಮೀಟರ್‌ನಲ್ಲಿ ಚೀನಾ ಕುಳಿತಿದೆ. ಸ್ವಲ್ಪ ಸಮಯದ ಹಿಂದೆ ನಮ್ಮ ವಿದೇಶಾಂಗ ಕಾರ್ಯದರ್ಶಿ(ವಿಕ್ರಮ್ ಮಿಶ್ರಿ) ಚೀನಾ ರಾಯಭಾರಿಯೊಂದಿಗೆ ಕೇಕ್ ಕತ್ತರಿಸುತ್ತಿರುವುದನ್ನು ನೋಡಿ ನನಗೆ ಆಘಾತವಾಯಿತು. ಪ್ರಶ್ನೆ ಏನೆಂದರೆ, ಚೀನಾ ವಶಪಡಿಸಿಕೊಂಡಿರುವ 4,000 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಪ್ರದೇಶಕ್ಕೆ ನಿಖರವಾಗಿ ಏನಾಗುತ್ತಿದೆ?" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
2020 ರ ಗಾಲ್ವಾನ್ ಕಣಿವೆಯ ಘರ್ಷಣೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಈ ಸಂಘರ್ಘದಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಆದರೆ ಹುತಾತ್ಮರ ನೆನಪಿಗಾಗಿ "ಕೇಕ್ ಕತ್ತರಿಸುವ ಮೂಲಕ ಸಂಭ್ರಮ ನಡೆಯುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
ಸಹಜ ಸ್ಥಿತಿಗೆ ಬರುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ನಾವು ನಮ್ಮ ಭೂಭಾಗವನ್ನು ಮರಳಿ ಪಡೆಯಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
Advertisement