ಧೈರ್ಯವಿದ್ದರೆ BJP ಧ್ವಜದಿಂದ 'ಹಸಿರು ಬಣ್ಣ' ತೆಗೆದುಹಾಕಲಿ: ಉದ್ಧವ್ ಠಾಕ್ರೆ ಸವಾಲು!
ಮುಂಬೈ: ಧೈರ್ಯವಿದ್ದರೆ BJP ಪಕ್ಷದ ಧ್ವಜದಿಂದ 'ಹಸಿರು ಬಣ್ಣ' ತೆಗೆದುಹಾಕಲಿ ಎಂದು ಶಿವಸೇನೆ-ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಸವಾಲು ಹಾಕಿದ್ದಾರೆ.
ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಕೇಸರಿ ಪಕ್ಷವು ಮುಸ್ಲಿಮರನ್ನು ಇಷ್ಟಪಡದಿದ್ದರೆ ತನ್ನ ಪಕ್ಷದ ಧ್ವಜದಿಂದ ಹಸಿರು ಬಣ್ಣವನ್ನು ತೆಗೆದುಹಾಕಬೇಕು ಎಂದರು.
ಮಸೂದೆಯ ಬಗ್ಗೆ ಬಿಜೆಪಿಯ ಮೋಸದ ನಿಲುವು ಮತ್ತು ಭೂಮಿಯನ್ನು ಕಿತ್ತು ತನ್ನ ಕೈಗಾರಿಕೋದ್ಯಮಿ ಸ್ನೇಹಿತರಿಗೆ ನೀಡುವ ತಂತ್ರವನ್ನು ತಮ್ಮ ಪಕ್ಷವು ವಿರೋಧಿಸಿದೆ ಎಂದು ತಿಳಿಸಿದರು.
ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ತೋರಿದ "ಕಾಳಜಿ" ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರನ್ನು ನಾಚಿಕೆಪಡಿಸುವಂತಿತ್ತು ಎಂದು ಟೀಕಿಸಿದರು.
ಕೇಂದ್ರದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರದಲ್ಲಿದ್ದು, ಕೆಲಸ ಕಾರ್ಯಗಳು ಸಾಂಗವಾಗಿ ನಡೆಯುತ್ತಿದ್ದರೂ ಅದು ಹಿಂದೂ-ಮುಸ್ಲಿಂ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಸುಂಕದ ಅಪಾಯ ಮತ್ತು ಅದನ್ನು ತಗ್ಗಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ದೇಶಕ್ಕೆ ತಿಳಿಸಬೇಕಿತ್ತು ಎಂದು ಠಾಕ್ರೆ ಹೇಳಿದರು.