
ಪಾಟ್ನಾ: ಲೋಕಸಭೆಯ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಬೆಂಬಲ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತಿರುಗಿಬಿದ್ದಿರುವ ಹಲವು ಮುಸ್ಲಿಂ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.
ಶುಕ್ರವಾರ ಜೆಡಿ(ಯು) ಪಕ್ಷದ ಮತ್ತೊಬ್ಬ ನಾಯಕ ನದೀಮ್ ಅಖ್ತರ್ ಜೆಡಿಯುಗೆ ರಾಜೀನಾಮೆ ನೀಡಿದ್ದು, ವಕ್ಫ್ ಮಸೂದೆಗೆ ಬೆಂಬಲ ನೀಡಿದ ನಂತರ ಪಕ್ಷ ತೊರೆದ ಐದನೇ ನಾಯಕರಾಗಿದ್ದಾರೆ.
ಜೆಡಿ(ಯು) ನಾಯಕ ರಾಜು ನಯ್ಯರ್, ತಬ್ರೇಜ್ ಸಿದ್ದಿಕಿ ಅಲಿಗ್, ಮೊಹಮ್ಮದ್ ಶಹನವಾಜ್ ಮಲಿಕ್ ಮತ್ತು ಮೊಹಮ್ಮದ್ ಕಾಸಿಮ್ ಅನ್ಸಾರಿ ಸೇರಿದಂತೆ ಇತರ ನಾಲ್ವರು ನಾಯಕರು ಜೆಡಿಯುಗೆ ರಾಜೀನಾಮೆ ನೀಡಿದ್ದಾರೆ.
ಇದಕ್ಕೂ ಮೊದಲು, ಜೆಡಿ(ಯು) ನಾಯಕ ರಾಜು ನಯ್ಯರ್ ಅವರು ರಾಜೀನಾಮೆ ನೀಡಿದ್ದು, "ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದ ನಂತರ ಮತ್ತು ಬೆಂಬಲಿಸಿದ ನಂತರ ನಾನು ಜೆಡಿ(ಯು)ಗೆ ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದ್ದಾರೆ.
ಪಕ್ಷದ ಬಗ್ಗೆ ತಮ್ಮ ತೀವ್ರ ನಿರಾಶೆ ವ್ಯಕ್ತಪಡಿಸಿದ ಅವರು, "ಮುಸ್ಲಿಮರನ್ನು ದಮನಿಸುವ ಈ ಕರಾಳ ಕಾನೂನಿನ ಪರವಾಗಿ ಜೆಡಿ(ಯು) ಮತ ಚಲಾಯಿಸಿದ್ದರಿಂದ ನನಗೆ ತೀವ್ರ ನೋವಾಗಿದೆ" ಎಂದಿದ್ದಾರೆ.
"ಜೆಡಿ(ಯು) ಯುವ ಘಟಕದ ರಾಜ್ಯ ಕಾರ್ಯದರ್ಶಿ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಗೌರವಾನ್ವಿತ ಸಿಎಂ ನಿತೀಶ್ ಕುಮಾರ್ ಅವರಿಗೆ ಪತ್ರ ಕಳುಹಿಸಿದ್ದು, ಎಲ್ಲಾ ಜವಾಬ್ದಾರಿಗಳಿಂದ ನನ್ನನ್ನು ಮುಕ್ತಗೊಳಿಸಲು ವಿನಂತಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
Advertisement