
ಮುಂಬೈ: ಬುಕ್‌ಮೈಶೋ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರನ್ನು ತನ್ನ ವೆಬ್ ಸೈಟ್ ನಲ್ಲಿ ಕಲಾವಿದರ ಪಟ್ಟಿಯಿಂದ ತೆಗೆದು ಹಾಕಿದೆ ಎಂದು ಶಿವಸೇನಾ ಕಾರ್ಯಕರ್ತ ರಾಹುಲ್ ಕನಾಲ್ ಅವರು ಶನಿವಾರ ಹೇಳಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ಹೊಂದಿರುವ ಕನಾಲ್, ತಮ್ಮ ಪೋರ್ಟಲ್ ಅನ್ನು ಸ್ವಚ್ಛವಾಗಿಟ್ಟುಕೊಂಡು ಅಂತಹ ಕಲಾವಿದರನ್ನು ಶುದ್ಧ ಮನರಂಜನೆಯ ಪಟ್ಟಿಯಿಂದ ಹೊರಗಿಟ್ಟಿದ್ದಕ್ಕಾಗಿ" ಬುಕ್‌ಮೈಶೋ ಸಿಇಒ ಆಶಿಶ್ ಹೇಮರಾಜ ಅವರಿಗೆ ಧನ್ಯವಾದ ಹೇಳಿದ್ದಾರೆ.
ಈ ಕುರಿತು ಬುಕ್‌ಮೈಶೋ ತಂಡವನ್ನು ಸಂಪರ್ಕಿಸಿದಾಗ, ಈಗ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
"ಈ ಕಲಾವಿದನನ್ನು ನಿಮ್ಮ ಮಾರಾಟ ಮತ್ತು ಪ್ರಚಾರ ಪಟ್ಟಿಯಿಂದ ಹೊರಗಿಡಲು ನಿಮ್ಮ ತಂಡಕ್ಕೆ ನೀವು ಬೆಂಬಲ ನೀಡಿದ್ದಕ್ಕಾಗಿ ನನ್ನ ಪ್ರಾಮಾಣಿಕ ಕೃತಜ್ಞತೆ ತಿಳಿಸಲು ಬಯಸುತ್ತೇನೆ. ಕಲಾವಿದರ ಪಟ್ಟಿಯಿಂದ ಅವರನ್ನು ಹೊರಗಿಟ್ಟಿದ್ದಕ್ಕಾಗಿ ಧನ್ಯವಾದಗಳು. ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಅದೇ ಸಮಯದಲ್ಲಿ ನಮ್ಮ ಭಾವನೆಗಳನ್ನು ಗೌರವಿಸುವಲ್ಲಿ ನಿಮ್ಮ ನಂಬಿಕೆ ನಿರ್ಣಾಯಕವಾಗಿದೆ" ಎಂದು ಕನಾಲ್ ಅವರು, ಹೇಮರಾಜ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅಪಹಾಸ್ಯ ಮಾಡಿದ 36 ವರ್ಷದ ಕಾಮ್ರಾ ಅವರ ವಿರುದ್ಧ ಶಿವಸೇನೆ ಕೇಸ್ ದಾಖಲಿಸಿದ್ದು, ಈ ಸಂಬಂಧ ಮುಂಬೈ ಪೊಲೀಸರು ಮೂರು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗಿಲ್ಲ.
ಕಾಮ್ರಾ ಅವರು ಇಂದು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಇಂದು ಸಹ ಗೈರು ಆಗಿದ್ದಾರೆ.
ಕಾಮ್ರಾಗೆ ಪೊಲೀಸರು ಮೂರನೇ ಬಾರಿ ಸಮನ್ಸ್ ನೀಡದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement