
ನವದೆಹಲಿ: ಕಳೆದ ಜನವರಿ 31 ರಂದು ಪ್ರಾರಂಭವಾದ ಸಂಸತ್ತಿನ ಬಜೆಟ್ ಅಧಿವೇಶನವು ನಿನ್ನೆ ಶುಕ್ರವಾರ ಎರಡೂ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದರೊಂದಿಗೆ ಮುಕ್ತಾಯಗೊಂಡಿದೆ. ಅಧಿವೇಶನದಲ್ಲಿ ಅಂಗೀಕರಿಸಲಾದ ಕೆಲವು ಪ್ರಮುಖ ಶಾಸನಗಳಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, ಹಣಕಾಸು ಮಸೂದೆ 2025 ಮತ್ತು ವಲಸೆ ಮತ್ತು ವಿದೇಶಿಯರ ಮಸೂದೆ ಸೇರಿವೆ. ಮುಂದಿನ ದಿನಗಳಲ್ಲಿ ಸಂಸತ್ತು ಕಲಾಪಕ್ಕೆ ಸೇರುವುದು ಇನ್ನು ಮಳೆಗಾಲದ ಅಧಿವೇಶನಗಳು.
ಅಧಿವೇಶನದಲ್ಲಿ ಹತ್ತು ಸರ್ಕಾರಿ ಮಸೂದೆಗಳನ್ನು ಮಂಡಿಸಿದ್ದು, 16 ಮಸೂದೆಗಳನ್ನು ಅಂಗೀಕರಿಸಲಾಯಿತು. ವಕ್ಫ್ (ತಿದ್ದುಪಡಿ ಮಸೂದೆ) 2025 ರ ಅಂಗೀಕಾರದ ಸಮಯದಲ್ಲಿ ಎರಡೂ ಸದನಗಳಲ್ಲಿ ಸಾಕಷ್ಟು ಚರ್ಚೆ, ವಾಗ್ಯುದ್ಧಗಳು ನಡೆದವು.
ಮೊನ್ನೆ ಏಪ್ರಿಲ್ 3 ರಂದು ಲೋಕಸಭೆ ಕಲಾಪ ವೇಳೆ ಶೂನ್ಯ ಸಮಯದಲ್ಲಿ 202 ಸಂಸದರು ಸಾರ್ವಜನಿಕ ಮಹತ್ವದ ವಿಷಯಗಳನ್ನು ಎತ್ತುವ ಮೂಲಕ ಸದನವು ದಾಖಲೆಯನ್ನು ನಿರ್ಮಿಸಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಉಪಕ್ರಮದ ಮೇರೆಗೆ ಲೋಕಸಭೆಯಲ್ಲಿ ಶೂನ್ಯ ಸಮಯವನ್ನು ಐದು ಗಂಟೆಗಳವರೆಗೆ ವಿಸ್ತರಿಸಲಾಯಿತು. ಈ ಹಿಂದೆ, ಜುಲೈ 18, 2019 ರಂದು ವಿಸ್ತೃತ ಶೂನ್ಯ ವೇಳೆಯಲ್ಲಿ 161 ಸಂಸದರು ಮಾತನಾಡಿದ್ದರು.
ಬಜೆಟ್ ಅಧಿವೇಶನ ವೇಳೆ ಮಣಿಪುರ ಹಿಂಸಾಚಾರ ಕುರಿತಾದ ಚರ್ಚೆಗಳು ಸೇರಿವೆ, ಇದು ರಾತ್ರಿಯಿಡೀ ನಡೆಯಿತು. ಪ್ರತಿಪಕ್ಷಗಳ ಪ್ರತಿಭಟನೆಯ ಹೊರತಾಗಿಯೂ, ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಣೆಯ ಕುರಿತಾದ ಶಾಸನಬದ್ಧ ನಿರ್ಣಯದ ಮೇಲಿನ ಚರ್ಚೆಯನ್ನು ಗುರುವಾರ ಬೆಳಗಿನ ಜಾವ 2 ಗಂಟೆಗೆ ಲೋಕಸಭೆಯಲ್ಲಿ 40 ನಿಮಿಷಗಳ ಕಾಲ ನಡೆಸಲಾಯಿತು.
ರಾಜ್ಯಸಭೆಯು ಏಪ್ರಿಲ್ 4 ರಂದು ಬೆಳಗಿನ ಜಾವ 2.37 ಕ್ಕೆ ಒಂದೂವರೆ ಗಂಟೆಗಳ ಕಾಲ ಚರ್ಚೆಯನ್ನು ಕೈಗೆತ್ತಿಕೊಂಡಿತು.. ಸಂವಿಧಾನ ವಿಧಿ 356 ರ ಪ್ರಕಾರ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಬೇಕಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಹೇಳಿಕೆಗಳ ಕುರಿತು ಸದನವು ಮಧ್ಯಾಹ್ನದ ವೇಳೆಗೆ ಮುಂದೂಡಲ್ಪಟ್ಟ ನಂತರ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಮ್ಮ ಸಮಾರೋಪ ಭಾಷಣವನ್ನು ಓದಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಅಧಿವೇಶನದಲ್ಲಿ ಸುಮಾರು 16 ಮಸೂದೆಗಳನ್ನು ಅಂಗೀಕರಿಸಲಾಗಿದೆ.
ನಾವು 18 ನೇ ಲೋಕಸಭೆಯ ನಾಲ್ಕನೇ ಅಧಿವೇಶನದ ಅಂತ್ಯದಲ್ಲಿದ್ದೇವೆ. ಈ ಅಧಿವೇಶನವು ಜನವರಿ 31ರಂದು ಪ್ರಾರಂಭವಾಯಿತು. ಈ ಅಧಿವೇಶನದಲ್ಲಿ, ನಾವು 26 ದಿನ ಕಲಾಪಗಳನ್ನು ನಡೆಸಿದ್ದೇವೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂಬ ಸೋನಿಯಾ ಗಾಂಧಿಯವರ ಹೇಳಿಕೆ ದುರದೃಷ್ಟಕರ ಮತ್ತು ಸದನದ ಘನತೆಗೆ ವಿರುದ್ಧವಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಅವರ ಹೇಳಿಕೆಯ ವಿರುದ್ಧ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಎತ್ತುತ್ತಿದ್ದರು.
ಅಧಿವೇಶನದ ಸಮಯದಲ್ಲಿ, ವಿವಿಧ ಸಚಿವಾಲಯಗಳು ಹಾಗೂ ಹಣಕಾಸು ಮಸೂದೆಗೆ ಅನುದಾನದ ಬೇಡಿಕೆಗಳಿಗೆ ಲೋಕಸಭೆ ಅನುಮೋದನೆ ನೀಡಿದ ನಂತರ ಸರ್ಕಾರ ತನ್ನ ಬಜೆಟ್ ಅಧಿವೇಶನವನ್ನು ಪೂರ್ಣಗೊಳಿಸಿತು. ಕೇಂದ್ರ ಸರ್ಕಾರದ ಆಡಳಿತದಲ್ಲಿರುವ ಮಣಿಪುರದ ಬಜೆಟ್ ನ್ನು ಸಹ ಅಂಗೀಕರಿಸಲಾಗಿದೆ.
ರಾಜ್ಯಸಭೆಯ ಅಧ್ಯಕ್ಷ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ತಮ್ಮ ಸಮಾರೋಪ ಭಾಷಣದಲ್ಲಿ, ಸದನವು 159 ಗಂಟೆಗಳ ಕಾಲ ಕಾರ್ಯನಿರ್ವಹಿಸಿದ್ದು, ಶೇಕಡಾ 119 ರಷ್ಟು ಫಲಪ್ರದ ಚರ್ಚೆ, ಮಾತುಕತೆಗಳು ನಡೆದಿವೆ ಎಂದಿದ್ದಾರೆ.
Advertisement