
ಸೂರತ್: ತರಕಾರಿ ಕಳ್ಳಿಯರೆಂದು ತಾಯಿ ಹಾಗೂ ಮಗಳ ಕೂದಲು ಹಿಡಿದು ರಸ್ತೆಯಲ್ಲಿ ಎಳೆದಾಡಿ, ಕಾಲಿನಿಂದ ಒದ್ದು ಹಲ್ಲೆ ನಡೆಸಿರುವ ಘಟನೆ ಗುಜರಾತ್ ನ ಸೂರತ್ ನ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.
ಗುರುವಾರ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ 30 ವರ್ಷದ ತಾಯಿ ಹಾಗೂ ಆಕೆಯ ಮಗಳನ್ನು ಇಬ್ಬರು ಭದ್ರತಾ ಸಿಬ್ಬಂದಿಗಳು ಮನಸೋ ಇಚ್ಚೆ ಥಳಿಸುತ್ತಿದ್ದರೆ, ಸಾರ್ವಜನಿಕರು ಮೂಕ ಪ್ರೇಕ್ಷಕರಂತೆ ನಿಂತೂ ನೋಡುತ್ತಿದ್ದು ಯಾರೂ ಕೂಡಾ ಬಿಡಿಸಲು ಮುಂದಾಗಿಲ್ಲ.
ವಿಡಿಯೋವೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ನಂತೆ ಕಾಣಿಸಿಕೊಳ್ಳುವ ವ್ಯಕ್ತಿಯೊಬ್ಬ ಕೈಯಲ್ಲಿ ದೋಣಿ ಹಿಡಿದು ಹಲ್ಲೆ ನಡೆಸುತ್ತಿದ್ದರೆ, ಮತ್ತಿಬ್ಬರು ಯುವತಿಯ ತಲೆಗೂದಲು ಹಿಡಿದು ಎಳೆದಾಡಿದ್ದು, ನೆಲಕ್ಕೆ ತಳ್ಳಿ ಹೊಟ್ಟೆಗೆ ಕಾಲಿನಿಂದ ಒದೆಯುವುದು ಕಂಡುಬಂದಿದೆ.
ಸೂರತ್ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಘಟನೆಯನ್ನು ದೃಢಪಡಿಸಿದ್ದಾರೆ. ಮಹಿಳೆಯರೊಂದಿಗೆ ಅಮಾನುಷವಾಗಿ ವರ್ತಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement