
ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ತಮಿಳುನಾಡು ಘಟಕದ ಅಧ್ಯಕ್ಷರನ್ನಾಗಿ ನೈನಾರ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಿದೆ.
ಪಕ್ಷದಲ್ಲಿ ಶಾಸಕರಾಗಿರುವ ನೈನಾರ್ ನಾಗೇಂದ್ರನ್ ಈಗ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ ಹಾಗೂ ಅವರ ಹಿನ್ನೆಲೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು ಇದರ ಬಗ್ಗೆ ಜನತೆ ಸರ್ಚ್ ಮಾಡುತ್ತಿದ್ದಾರೆ.
AIADMK ಯ ಷರತ್ತಿಗೆ ಮಣಿದು ಬಿಜೆಪಿ ತನ್ನ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ನೈನಾರ್ ನಾಗೇಂದ್ರನ್ ಕೂಡಾ ಮೂಲತಃ AIADMK ಪಕ್ಷದವರೇ ಎಂಬುದು ಗಮನಾರ್ಹ ಅಂಶ.
ಎಐಎಡಿಎಂಕೆಯಿಂದ ಪಕ್ಷಾಂತರಗೊಂಡ ನೈನಾರ್ ನಾಗೇಂದ್ರನ್, ಫೈರ್ ಬ್ರ್ಯಾಂಡ್ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರ ಉತ್ತರಾಧಿಕಾರಿಯಾಗಿ ತಮಿಳುನಾಡು ಬಿಜೆಪಿಯ 13 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಅವರು ಮಾತ್ರ ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರಿಂದ ಅವರು ಸ್ಪರ್ಧೆಯಲ್ಲಿ ಏಕೈಕ ಸ್ಪರ್ಧಿಯಾಗಿದ್ದರು.
ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗಿದ್ದು, ದ್ರಾವಿಡ ರಾಜಕೀಯ ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ರಾಜಕೀಯದ ಭವಿಷ್ಯವನ್ನು ನಿರ್ಧರಿಸಬಹುದಾದ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವುದು ನೈನಾರ್ ನಾಗೇಂದ್ರನ್ ಅವರಿಗೆ ಕಠಿಣ ಕೆಲಸವಾಗಿದೆ.
ನೈನಾರ್ ನಾಗೇಂದ್ರನ್ ಯಾರು?
ನೈನಾರ್ ನಾಗೇಂದ್ರನ್ ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿದ್ದಾರೆ. 2001 ರಿಂದ 2006 ರವರೆಗೆ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದರು.
ಅಕ್ಟೋಬರ್ 16, 1960 ರಂದು ವಡಿವೆಶ್ವರಂನಲ್ಲಿ ಜನಿಸಿದ ನಾಗೇಂದ್ರನ್, ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ತಿರುನಲ್ವೇಲಿ ಕ್ಷೇತ್ರದಿಂದ ಶಾಸಕರಾಗಿ ಸೇವೆ ಸಲ್ಲಿಸಿದರು. 2001 ರಿಂದ 2006 ರವರೆಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಅವರು ಕ್ಯಾಬಿನೆಟ್ ಸಚಿವರಾಗಿ, ವಿದ್ಯುತ್, ಕೈಗಾರಿಕೆ ಮತ್ತು ಸಾರಿಗೆ ಖಾತೆಗಳನ್ನು ಹೊಂದಿದ್ದರು.
2011 ರಲ್ಲಿ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದಾಗ ನಾಗೇಂದ್ರನ್ ಅವರನ್ನು ಸಂಪುಟದಿಂದ ಹೊರಗಿಡಲಾಯಿತು, ಮತ್ತು ಜಯಲಲಿತಾ ಅವರ ಮರಣದ ನಂತರ 2017 ರಲ್ಲಿ ಅವರು ಬಿಜೆಪಿಗೆ ಸೇರಿದರು.
ನೈನಾರ್ ನಾಗೇಂದ್ರನ್ 2020 ರಿಂದ ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು 2021 ರ ವಿಧಾನಸಭಾ ಚುನಾವಣೆಯಲ್ಲಿ ತಿರುನಲ್ವೇಲಿ ಕ್ಷೇತ್ರದಿಂದ ಪಕ್ಷದ ಟಿಕೆಟ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ನೈನಾರ್ ನಾಗೇಂದ್ರನ್ ಅವರು ತಮಿಳುನಾಡು ರಾಜಕಾರಣದಲ್ಲಿ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. 2006 ರಲ್ಲಿ, ಅವರು ಸಚಿವರಾಗಿದ್ದಾಗ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹಿಸಿರುವುದು ತನಿಖೆಯಲ್ಲಿ ಬಹಿರಂಗವಾಯಿತು. 2010 ರಲ್ಲಿ ₹3.9 ಕೋಟಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿಲೆನ್ಸ್ ನಿರ್ದೇಶನಾಲಯವು ಅವರ, ಅವರ ಪತ್ನಿ ಮತ್ತು ಇತರ ನಾಲ್ವರು ಸಂಬಂಧಿಕರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.
'ಆಂಡಾಲ್' ಕುರಿತ ವಿವಾದಾತ್ಮಕ ಹೇಳಿಕೆಗಳಿಗಾಗಿ 2018 ರ ಜನವರಿಯಲ್ಲಿ ಖ್ಯಾತ ತಮಿಳು ಗೀತರಚನೆಕಾರ ಮತ್ತು ಬರಹಗಾರ ವೈರಮುತ್ತುಗೆ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ ಎಂದು ನೈನಾರ್ ನಾಗೇಂದ್ರನ್ ಅವರ ಮೇಲೆ ಆರೋಪ ಕೇಳಿಬಂದಿತ್ತು. 'ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುವ' ಜನರನ್ನು ಕೊಲ್ಲಲು 'ಯಾವುದೇ ಹಿಂಜರಿಕೆ ಇರಬಾರದು' ಎಂದೂ ಅವರು ಹೇಳಿದ್ದರು.
Advertisement