
ಕೊಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದವು ಎಂದು ಹೇಳಲಾದ ಅನೇಕ ವಿಡಿಯೋಗಳು, ಫೋಟೋಗಳು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಿಂಸಾಚಾರ ಮತ್ತು ಅಗ್ನಿಸ್ಪರ್ಶದ ನಕಲಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಜೆಪಿ ಸಂಚು ರೂಪಿಸಿದೆ ಎಂದು ಆಡಳಿತರೂಢ ಟಿಎಂಸಿ ಆರೋಪಿಸಿದೆ.
ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಹಂಚಿಕೊಂಡಿರುವ ಒಂಬತ್ತು ಹಿಂದೂ ಹಬ್ಬಗಳ ಸಂದರ್ಭದಲ್ಲಿ ಆದ ಹಿಂಸಾಚಾರ ಮತ್ತು ಅಗ್ನಿಸ್ಪರ್ಶದ ಘಟನೆಗಳು ಎನ್ನಲಾದ ವಿಭಿನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಟಿಎಂಸಿ ರಾಜ್ಯಸಭಾ ಸಂಸದರಾಗಿರುವ ಸಾಗರಿಕಾ ಘೋಷ್, ''ಆಘಾತಕಾರಿ ಮತ್ತು ಆತಂಕಕಾರಿಯಾದದ್ದು. ರಾಜ್ಯ ಬಿಜೆಪಿ ನಿರ್ಲಜ್ಜವಾಗಿ ನಕಲಿ ಸುದ್ದಿಗಳನ್ನು ಹರಡುತ್ತಿದೆ. ಇತರ ರಾಜ್ಯಗಳ ಹಿಂಸಾಚಾರದ ಫೋಟೋಗಳನ್ನು (ಹೆಚ್ಚಿನವು ಬಿಜೆಪಿ ಆಡಳಿತದ ರಾಜ್ಯಗಳು) ಬಂಗಾಳದಲ್ಲಾದ ಫೋಟೋಗಳು ಎಂದು ಬಳಸಿಕೊಳ್ಳಲಾಗುತ್ತಿದೆ. ಇದು ದ್ವೇಷದ ಮತ್ತು ಷಡ್ಯಂತ್ರದ ಸ್ಪಷ್ಪವಾದ ಉದಾಹರಣೆಯಾಗಿದೆ. ಸಾಮಾಜಿಕ ಸಾಮರಸ್ಯ ಕಾಪಾಡಲು ಕೊಲ್ಕತ್ತಾ ಪೊಲೀಸರು ಮತ್ತು ಪಶ್ಚಿಮ ಬಂಗಾಳ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.
"ಮುರ್ಷಿದಾಬಾದ್‌ನಲ್ಲಿನ ಹಿಂಸಾಚಾರ ಅತ್ಯಂತ ದುರದೃಷ್ಟಕರವಾಗಿದೆ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಮತ್ತು ಹಿಂಸಾಚಾರಕ್ಕೆ ಕಾರಣವಾಗುವವರ ವಿರುದ್ಧ ಯಾವುದೇ ಧರ್ಮವನ್ನು ಲೆಕ್ಕಿಸದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಬಿಜೆಪಿಯು ಧರ್ಮಗಳನ್ನು ವಿಭಜಿಸುವ ಮತ್ತು ಪ್ರಚೋದನೆಯ ರಾಜಕೀಯದಲ್ಲಿ ತೊಡಗಿದೆ ಎಂದು ಅವರು ಮತ್ತೊಂದು ಫೋಸ್ಟ್ ನಲ್ಲಿ ಆರೋಪಿಸಿದ್ದಾರೆ.
ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗುಂಡೇಟಿಗೆ ಇಜಾಜ್ ಮೊಮಿನ್ ಎಂಬ ಯುವಕ ಮೃತಪಟ್ಟ ನಂತರ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಿಂದೂಗಳ ಮೇಲಿನ ದಾಳಿಗೆ ಟಿಎಂಸಿ ಆಡಳಿತದಲ್ಲಿ ಧಾರ್ಮಿಕ ಮೂಲಭೂತವಾದಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಆರೋಪ ಕುರಿತು ಸಾಗರಿಕಾ ಘೋಷ್ ಪ್ರತಿಕ್ರಿಯಿಸಿದ್ದಾರೆ.
ಸಮಾಹರ್‌ಗಂಜ್‌ನಲ್ಲಿ ನಡೆದ ಪ್ರತ್ಯೇಕ ಹಿಂಸಾಚಾರ ಘಟನೆಯಲ್ಲಿ ತಂದೆ ಮತ್ತು ಮಗ-ಹರಗೋಬಿಂದೋ ದಾಸ್ (72) ಮತ್ತು ಚಂದನ್ ದಾಸ್ (40) ಅವರನ್ನು ಹತ್ಯೆ ಮಾಡಲಾಗಿತ್ತು. ಪೊಲೀಸ್ ವ್ಯಾನ್‌ಗಳು ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ, ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಜಿಲ್ಲೆಯ ಹಲವಾರು ಭಾಗಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಲಾಗಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 150 ಮಂದಿಯನ್ನು ಬಂಧಿಸಿದ್ದಾರೆ.
Advertisement