
ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ, 2025 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಜನಸಾಮಾನ್ಯರ ವಿರೋಧದ ಹೊರತಾಗಿಯೂ, ಜಂಟಿ ಸಂಸದೀಯ ಸಮಿತಿಯ ಸದಸ್ಯರು ಮತ್ತು ಇತರ ಮಿತ್ರ ಪಕ್ಷಗಳು ಎತ್ತಿದ ಆಕ್ಷೇಪಣೆಗಳನ್ನು ಸರಿಯಾಗಿ ಪರಿಗಣಿಸದೆ ಕೇಂದ್ರ ಸರ್ಕಾರ ವಕ್ಫ್(ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ ಎಂದು ಎಡಪಕ್ಷ ತನ್ನ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮೂಲಕ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.
ರಾಷ್ಟ್ರಪತಿಗಳ ಅನುಮೋದನೆಯ ನಂತರ ಏಪ್ರಿಲ್ 5 ರಂದು ಪ್ರಕಟವಾದ ತಿದ್ದುಪಡಿ ಕಾಯ್ದೆಯು, ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ಗಣನೀಯವಾಗಿ ಮೊಟಕುಗೊಳಿಸುತ್ತದೆ ಮತ್ತು ವಕ್ಫ್ ಕಾಯ್ದೆ, 1995 ರ ಚೌಕಟ್ಟನ್ನು ಮೂಲಭೂತವಾಗಿ ಪರಿವರ್ತಿಸುತ್ತದೆ ಎಂದು ವಕೀಲ ರಾಮ್ ಶಂಕರ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.
"ಈ ಕಾಯ್ದೆ ವಕ್ಫ್ ಮಂಡಳಿಯ ಆಡಳಿತದ ಮೇಲೆ ಕೇಂದ್ರ ಸರ್ಕಾರಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ, ಇದರಿಂದಾಗಿ ಸಂವಿಧಾನದ 25, 26 ಮತ್ತು 29ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳನ್ನು ಉಲ್ಲಂಘಿಸುತ್ತದೆ" ಎಂದು ಸಿಪಿಐ ಹೇಳಿದೆ.
Advertisement