ಹರಿಯಾಣ: ಪೈಶಾಚಿಕ ಕೃತ್ಯ; ICU ವೆಂಟಿಲೇಟರ್‌ನಲ್ಲಿದ್ದ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!
ಗುರುಗ್ರಾಮ: ದೇಶಾದ್ಯಂತ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸರ್ಕಾರ ಎಷ್ಟೇ ಕಾನೂನು ಜಾರಿಗೆ ತಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.ಮತ್ತಷ್ಟು ಹೆಚ್ಚಾಗುತ್ತಿವೆ.
ಕಾಮತೃಷೆಗೆ ಮಕ್ಕಳು, ಹಿರಿಯ ಮಹಿಳೆಯರು ಎನ್ನದೇ ಅಮಾನವೀಯವಾಗಿ ಅತ್ಯಾಚಾರ, ಸಾವಿನಂತಹ ಘಟನೆಗಳು ನಡೆಯುತ್ತಿವೆ. ಹರಿಯಾಣದಲ್ಲಿ ICU ವೆಂಟಿಲೇಟರ್‌ನಲ್ಲಿದ್ದ ಗಗನಸಖಿ ಮೇಲೆ ಆಸ್ಪತ್ರೆ ಸಿಬ್ಬಂದಿಯೇ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ.
ಗುರುಗ್ರಾಮ್‌ನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ಗಗನಸಖಿಯೊಬ್ಬರು ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಾಮುಕರ ಪತ್ತೆಗಾಗಿ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
46 ವರ್ಷದ ಗಗನಸಖಿ ತಾನು ಉಳಿದುಕೊಂಡಿದ್ದ ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುವಾಗ ಅಸ್ಥಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಏಪ್ರಿಲ್ 5 ರಂದು ಆಕೆಯನ್ನು ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಭಾನುವಾರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಏಪ್ರಿಲ್ 6 ರಂದು ವೆಂಟಿಲೇಟರ್‌ನಲ್ಲಿದ್ದಾಗ ಕೆಲವು ಆಸ್ಪತ್ರೆಯ ಸಿಬ್ಬಂದಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಡಿಸ್ಚಾರ್ಜ್ ಆದ ನಂತರ ಆಕೆ ನಡೆದ ಘಟನೆಗಳ ಬಗ್ಗೆ ತನ್ನ ಪತಿಗೆ ತಿಳಿಸಿದ್ದು, ನಂತರ ಪೊಲೀಸರನ್ನು ಸಂಪರ್ಕಿಸಿರುವುದಾಗಿ ಗಗನ ಸಖಿ ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ