
ಇಂದೋರ್: ದೇಶಾದ್ಯಂತ ಸಂವಿಧಾನ ಶಿಲ್ಪಿ ಮತ್ತು ಸಮಾಜ ಸುಧಾರಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ನಿನ್ನೆ ಸೋಮವಾರ ಆಚರಿಸಿದ ದಿನ, ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ನಂತರ ದಲಿತ ಸಮುದಾಯದ ವರನೊಬ್ಬ ಪೊಲೀಸರ ಸಮ್ಮುಖದಲ್ಲಿ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಬೇಕಾಗಿ ಬಂದ ಘಟನೆ ನಡೆಯಿತು.
ದಲಿತ ಸಮುದಾಯದ ಅತ್ಯಂತ ಗೌರವಾನ್ವಿತ ವ್ಯಕ್ತಿ ಎನಿಸಿಕೊಂಡಿದ್ದ ಡಾ. ಅಂಬೇಡ್ಕರ್ ಜನಿಸಿರುವ ಏಪ್ರಿಲ್ 14, 1891 ರ ಇಂದೋರ್ ಜಿಲ್ಲೆಯ ಮ್ಹೋವ್‌ನಲ್ಲಿ ಈ ಘಟನೆ ನಡೆದಿದ್ದು ವಿಷಾದನೀಯ.
ಪ್ರತ್ಯಕ್ಷದರ್ಶಿಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೊ ಪ್ರಕಾರ, ಬಲಾಯಿ ಸಮುದಾಯಕ್ಕೆ ಸೇರಿದ ವರನು ತನ್ನ ಮದುವೆ ಮೆರವಣಿಗೆ ಮತ್ತು ಅತಿಥಿಗಳೊಂದಿಗೆ ಮ್ಹೋವ್ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಸಾಂಘ್ವಿ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಬಂದಿದ್ದನು, ಆತ ದಲಿತ ಸಮುದಾಯದವನೆಂದು ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.
ಸುಮಾರು ಎರಡು ಗಂಟೆಗಳ ಕಾಲ ನಡೆದ ವಾಗ್ವಾದದ ನಂತರ, ವರನು ತನ್ನ ಕುಟುಂಬದ ಕೆಲವು ಸದಸ್ಯರೊಂದಿಗೆ ಪೊಲೀಸರ ಸಮ್ಮುಖದಲ್ಲಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದನು.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಖಿಲ ಭಾರತ ಬಲೈ ಮಹಾಸಂಘದ ಅಧ್ಯಕ್ಷ ಮನೋಜ್ ಪರ್ಮಾರ್, ನಮ್ಮ ಸಮುದಾಯವು ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಬೇಕಾಗಿದೆ ಎಂದರು. ದಲಿತ ಸಮುದಾಯದ ವ್ಯಕ್ತಿಯನ್ನು ದೇವಾಲಯಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ಹೇಳಿಕೆಯನ್ನು ಪೊಲೀಸರು ನಿರಾಕರಿಸಿದ್ದಾರೆ. ಸ್ಥಳೀಯ ಸಂಪ್ರದಾಯಗಳ ಪ್ರಕಾರ ಅರ್ಚಕರಿಗೆ ಮಾತ್ರ ಅವಕಾಶವಿರುವ ದೇವಾಲಯದ ಗರ್ಭಗುಡಿಗೆ ಪ್ರವೇಶಿಸುವ ಬಗ್ಗೆ ಎರಡು ಗುಂಪುಗಳ ನಡುವೆ ವಾದವಾಗಿತ್ತು.
ಈ ಘಟನೆಯ ಕೆಲವು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಒಂದು ವೀಡಿಯೊದಲ್ಲಿ, ವರನು ತನ್ನ ಮದುವೆ ಮೆರವಣಿಗೆಯೊಂದಿಗೆ ದೇವಾಲಯದ ಹೊರಗೆ ನಿಂತಿರುವುದು ಮತ್ತು 'ಬರಾತಿ'ಗಳು ಅಂದರೆ ಮದುವೆಗೆ ಬಂದ ಅತಿಥಿಗಳು ಇನ್ನೊಂದು ಕಡೆಯವರೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ,
ವಿವಾದ ಭುಗಿಲೆದ್ದ ನಂತರ, ಪೊಲೀಸರು ಇಡೀ ಘಟನೆಯನ್ನು ಸ್ಪಷ್ಟಪಡಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಬೆಟ್ಮಾ ಪೊಲೀಸ್ ಠಾಣೆ ಪ್ರದೇಶದ ಸಾಂಘ್ವಿ ಗ್ರಾಮದಲ್ಲಿ ದಲಿತ ವರನನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ, ಇದು ದಾರಿ ತಪ್ಪಿಸುವಂತಿದೆ. ವರ ಮತ್ತು ಅವರ ಕುಟುಂಬ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು. ಇದಾದ ನಂತರ, ಮದುವೆ ಮೆರವಣಿಗೆಯನ್ನು ಶಾಂತಿಯುತವಾಗಿ ಹೊರಗೆ ಕರೆದೊಯ್ಯಲಾಯಿತು ಎಂದಿದ್ದಾರೆ.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿ, ದೇವಾಲಯದ ಗರ್ಭಗುಡಿಗೆ ಪ್ರವೇಶಿಸುವ ಬಗ್ಗೆ ಎರಡೂ ಕಡೆಯ ಜನರನ್ನು ಮನವೊಲಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿದರು.
Advertisement