
ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಪಾಕಿಸ್ತಾನದ ಟೀಕೆಯನ್ನು ಭಾರತ ಬಲವಾಗಿ ಖಂಡಿಸಿದೆ. ಇತರರಿಗೆ ಉಪದೇಶ ನೀಡುವ ಬದಲು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವಲ್ಲಿ ಪಾಕಿಸ್ತಾನ ಗಮನಹರಿಸಬೇಕು ಎಂದು ಹೇಳಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ವಕ್ಫ್ ತಿದ್ದುಪಡಿ ಕಾನೂನಿನ ಕುರಿತು ಪಾಕಿಸ್ತಾನದ ಹೇಳಿಕೆಗಳನ್ನು ಪ್ರೇರೇಪಿತ ಮತ್ತು ಆಧಾರರಹಿತ ಎಂದು ಟೀಕಿಸಿದ್ದಾರೆ. ಭಾರತದ ಆಂತರಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನೆರೆಯ ದೇಶಕ್ಕೆ ಯಾವುದೇ ಅರ್ಹತೆ ಇಲ್ಲ ಎಂದು ಪ್ರತಿಪಾದಿಸಿದರು.
ವಕ್ಫ್ ಕಾನೂನು ಭಾರತೀಯ ಮುಸ್ಲಿಮರ ಧಾರ್ಮಿಕ ಮತ್ತು ಆರ್ಥಿಕ ಹಕ್ಕುಗಳ ಮೇಲೆ ಉಲ್ಲಂಘನೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರರು ಆರೋಪಿಸಿದ ನಂತರ ಭಾರತದ ಪ್ರತಿಕ್ರಿಯೆ ಬಂದಿದೆ.
ಭಾರತದ ಸಂಸತ್ತು ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತು ಪಾಕಿಸ್ತಾನ ಮಾಡಿದ ಪ್ರೇರೇಪಿತ ಮತ್ತು ಆಧಾರರಹಿತ ಹೇಳಿಕೆಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ ಎಂದು ಜೈಸ್ವಾಲ್ ಹೇಳಿದರು. ಕಾನೂನಿನ ಬಗ್ಗೆ ಪಾಕಿಸ್ತಾನ ಮಾಡಿದ ಹೇಳಿಕೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ವಿದೇಶಾಂಗ ಸಚಿವಾಲಯದ ವಕ್ತಾರರು ಉತ್ತರಿಸುತ್ತಿದ್ದರು.
ಭಾರತದ ಆಂತರಿಕ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಅರ್ಹತೆ ಇಲ್ಲ ಎಂದರು. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ವಿಷಯದಲ್ಲಿ ಪಾಕಿಸ್ತಾನವು ಇತರರಿಗೆ ಉಪದೇಶ ಮಾಡುವ ಬದಲು ತನ್ನದೇ ಆದ ಕಳಪೆ ದಾಖಲೆಯನ್ನು ನೋಡುವುದು ಉತ್ತಮ ಎಂದರು.
ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರರು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಮಸೀದಿಗಳು ಮತ್ತು ದೇವಾಲಯಗಳು ಸೇರಿದಂತೆ ಮುಸ್ಲಿಮರನ್ನು ಅವರ ಆಸ್ತಿಗಳಿಂದ ಹೊರಹಾಕುವ ಪ್ರಯತ್ನ ಎಂದು ಕರೆದಿದ್ದಾರೆ ಎಂದು ವರದಿಯಾಗಿದೆ. ಇದು ಭಾರತೀಯ ಮುಸ್ಲಿಮರ ಧಾರ್ಮಿಕ ಮತ್ತು ಆರ್ಥಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಾವು ಬಲವಾಗಿ ನಂಬುತ್ತೇವೆ ಎಂದು ಆರೋಪಿಸಿದರು.
ವಕ್ಫ್ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಮರನ್ನು ಸಮಾಜದಲ್ಲಿ ಮತ್ತಷ್ಟು ದುಸ್ಥಿತಿಗೆ ಕೊಂಡೊಯ್ಯುತ್ತದೆ ಎಂಬ ಗಂಭೀರ ಆತಂಕಗಳಿವೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರರು ಹೇಳಿದ್ದರು.
Advertisement