
ರಾಯ್‌ಪುರ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಪೊಲೀಸರಿಗೆ ಬೇಕಾಗಿದ್ದ ಸಿಕ್ಕಿಬಿದ್ದರೆ 13 ಲಕ್ಷ ರೂಪಾಯಿ ಸಾಮೂಹಿಕ ಬಹುಮಾನ ಘೋಷಣೆಯಾಗಿದ್ದ ಇಬ್ಬರು ಕಟ್ಟಾ ನಕ್ಸಲರನ್ನು ಭದ್ರತಾ ಪಡೆಗಳು ಇಂದು ನಸುಕಿನ ಜಾವ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಾರೆ.
ನಿನ್ನೆ ಸಂಜೆ ಕೊಂಡಗಾಂವ್ ಮತ್ತು ನಾರಾಯಣಪುರ ಜಿಲ್ಲೆಗಳ ಗಡಿಯಲ್ಲಿರುವ ಕಿಲಾಮ್-ಬರ್ಗಮ್ ಗ್ರಾಮಗಳ ಕಾಡಿನಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲೈಟ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತಾರ್ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ತಿಳಿಸಿದ್ದಾರೆ.
ಕೊಂಡಗಾಂವ್‌ನಿಂದ ರಾಜ್ಯ ಪೊಲೀಸರ ಎರಡೂ ಘಟಕಗಳಾದ ಜಿಲ್ಲಾ ಮೀಸಲು ಪಡೆ (DRG) ಮತ್ತು ಬಸ್ತಾರ್ ಫೈಟರ್ಸ್‌ಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು.
ಇಲ್ಲಿಯವರೆಗೆ, ಇಬ್ಬರು ನಕ್ಸಲರ ಮೃತದೇಹಗಳು, ಒಂದು ಎಕೆ-47 ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು, ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಹತ್ಯೆಗೊಳಗಾದ ನಕ್ಸಲರನ್ನು ಮಾವೋವಾದಿಗಳ ಪೂರ್ವ ಬಸ್ತಾರ್ ವಿಭಾಗದ ಮಾವೋವಾದಿ ಕಮಾಂಡರ್ ಹಲ್ದಾರ್ ಮತ್ತು ಪ್ರದೇಶ ಸಮಿತಿ ಸದಸ್ಯ ರಾಮೆ ಎಂದು ಗುರುತಿಸಲಾಗಿದೆ. ಹಲ್ದಾರ್ ಮತ್ತು ರಾಮೆ ಅವರ ತಲೆಗೆ ಕ್ರಮವಾಗಿ 8 ಲಕ್ಷ ಮತ್ತು 5 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.
ಈ ವರ್ಷ ಇಲ್ಲಿಯವರೆಗೆ ರಾಜ್ಯದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 140 ನಕ್ಸಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನಾರಾಯಣಪುರ ಮತ್ತು ಕೊಂಡಗಾಂವ್ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ 123 ನಕ್ಸಲರನ್ನು ನಿರ್ಮೂಲನೆ ಮಾಡಲಾಗಿದೆ.
Advertisement