
ಚೆನ್ನೈ: ರಾಜ್ಯಪಾಲರ ಕುರಿತ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಸ್ವಾಗತಾರ್ಹ, ಆದರೆ ಈ ತೀರ್ಪು "ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು" ಬೆಚ್ಚಿಬೀಳಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರಪತಿಗಳಿಗೆ ಗಡುವು ವಿಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಟೀಕಿಸಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ತಮಿಳುನಾಡು ಮುಖ್ಯಮಂತ್ರಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಪತ್ರಕರ್ತರೊಬ್ಬರ ಕಾಮೆಂಟ್ ಮತ್ತು ಧನಕರ್ ಅವರನ್ನು ಟೀಕಿಸಿದ ಇಂಗ್ಲಿಷ್ ದಿನಪತ್ರಿಕೆಯ ಸಂಪಾದಕೀಯವನ್ನು ಸ್ಟಾಲಿನ್ ಟ್ಯಾಗ್ ಮಾಡಿದ್ದಾರೆ.
"ನಾವು ನಮ್ಮ ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಪ್ರಸ್ತುತ ಅಸ್ವಸ್ಥತೆಯು ಪ್ರತಿಪಕ್ಷಗಳ ಸರ್ಕಾರಗಳನ್ನು ದುರ್ಬಲಗೊಳಿಸಲು ಮತ್ತು ಬಲಪಂಥೀಯ ನಿರೂಪಣೆಗಳನ್ನು ಸಾರ್ವಜನಿಕ ಚರ್ಚೆಯಲ್ಲಿ ತುಂಬಲು ರಾಜ್ಯಪಾಲರು, ಉಪ ರಾಷ್ಟ್ರಪತಿಗಳು ಮತ್ತು ರಾಷ್ಟ್ರಪತಿಗಳು ಸೇರಿದಂತೆ ಸಾಂವಿಧಾನಿಕ ಕಚೇರಿಗಳನ್ನೂ ರಾಜಕೀಯೀಕರಣಗೊಳಿಸಲಾಗುತ್ತಿದೆ" ಎಂದು ಸ್ಟಾಲಿನ್ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಪ್ರಜಾಪ್ರಭುತ್ವದಲ್ಲಿ, ಸರ್ಕಾರಗಳನ್ನು ಚುನಾಯಿತ ಪ್ರತಿನಿಧಿಗಳಿಂದ ನಡೆಯಬೇಕು. ನಾಮ ನಿರ್ದೇಶನಗೊಂಡವರಿಂದ ಅಲ್ಲ. ಯಾರೂ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ನಮ್ಮ ಗೌರವಾನ್ವಿತ ಸುಪ್ರೀಂ ಕೋರ್ಟ್ ಕೂಡ ಇದನ್ನೇ ಎತ್ತಿ ತೋರಿಸಿದೆ ಮತ್ತು ಅದರ ಐತಿಹಾಸಿಕ ತೀರ್ಪು ಪ್ರಕ್ರಿಯೆಯನ್ನು ಮರುಹೊಂದಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ" ಎಂದು ಸ್ಟಾಲಿನ್ ಬರೆದಿದ್ದಾರೆ.
"ಆದ್ದರಿಂದ, ಈ ಸ್ವಾಗತಾರ್ಹ ತೀರ್ಪು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಬೆಚ್ಚಿಬೀಳಿಸಿದೆ" ಎಂದು ಸ್ಟಾಲಿನ್ ಪರೋಕ್ಷವಾಗಿ ಧನಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಸೂದೆಗಳ ಕುರಿತು ನಿರ್ಧರಿಸಲು ರಾಷ್ಟ್ರಪತಿಗಳಿಗೆ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಬಗ್ಗೆ ನಿನ್ನೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಜಗದೀಪ್ ಧನಕರ್ ಅವರು, "ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ" ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ನಮ್ಮಲ್ಲಿ ಶಾಸನ ರಚಿಸುವ, ಕಾರ್ಯಕಾರಿ ಕಾರ್ಯಗಳನ್ನು ನಿರ್ವಹಿಸುವ, ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸುವ ನ್ಯಾಯಾಧೀಶರೂ ಇದ್ದಾರೆ ಮತ್ತು ಅವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ. ಏಕೆಂದರೆ ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ" ಎಂದು ನ್ಯಾಯಾಂಗದ ವಿರುದ್ಧ ವಾಗ್ದಾಳಿ ನಡೆಸಿದ್ದರು.
Advertisement