
ನವದೆಹಲಿ: ವ್ಯಾಟಿಕನ್ ನಿಂದ ಭಾರತಕ್ಕೆ ಆಗಮಿಸಿರುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ನಿನ್ನೆ ವ್ಯಾಟಿಕನ್ ನಲ್ಲಿದ್ದ ಜೆಡಿ ವ್ಯಾನ್ಸ್ ಈಸ್ಟರ್ ಭಾನುವಾರದಂದು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಒಂದು ದಿನದ ನಂತರ, ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ.
"ಪೋಪ್ ಫ್ರಾನ್ಸಿಸ್ ಅವರ ನಿಧನದ ಬಗ್ಗೆ ನನಗೆ ಈಗಷ್ಟೇ ತಿಳಿದುಬಂತು. ಅವರನ್ನು ಪ್ರೀತಿಸುತ್ತಿದ್ದ ಪ್ರಪಂಚದಾದ್ಯಂತದ ಲಕ್ಷಾಂತರ ಕ್ರೈಸ್ತರಿಗೆ ನನ್ನ ಹೃದಯ ಮಿಡಿಯುತ್ತದೆ. ಅವರು ಸ್ಪಷ್ಟವಾಗಿಯೂ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ನನಗೆ ಅವರನ್ನು ಭೇಟಿಯಾಗುವ ಅದೃಷ್ಟ ಸಿಕ್ಕಿತು. ನಿನ್ನೆ ಅವರನ್ನು ನೋಡಿ ನನಗೆ ಸಂತೋಷವಾಯಿತು. ಆದರೆ ಕೋವಿಡ್‌ನ ಆರಂಭಿಕ ದಿನಗಳಲ್ಲಿ ಅವರು ನೀಡಿದ ಧರ್ಮೋಪದೇಶಕ್ಕಾಗಿ ನಾನು ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಅದು ನಿಜವಾಗಿಯೂ ತುಂಬಾ ಸುಂದರವಾಗಿತ್ತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ವ್ಯಾನ್ಸ್ ಪೋಸ್ಟ್ ಮಾಡಿದ್ದಾರೆ.
ಭಾನುವಾರ ಈಸ್ಟರ್ ಹಬ್ಬದಂದು ಪೋಪ್ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಬಳಿಕ ಕ್ರೈಸ್ತರಿಗೆ ಈಸ್ಟರ್ ಸಂದೇಶವನ್ನು ನೀಡಿದ್ದರು.
Advertisement