Pahalgam attack: ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು- ರಾಹುಲ್ ಗಾಂಧಿ
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾಹಿತಿ ಪಡೆಯಲು ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ತಾರಿಕ್ ಕರ್ರಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಯೋತ್ಪಾದಕ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ನ್ಯಾಯ ಮತ್ತು ನಮ್ಮ ಸಂಪೂರ್ಣ ಬೆಂಬಲ ಬೇಕು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ಜಮ್ಮು ಮತ್ತು ಕಾಶ್ಮೀರ ಪಿಸಿಸಿ ಅಧ್ಯಕ್ಷ ತಾರಿಕ್ ಕರ್ರಾ ಅವರೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಅಮೆರಿಕ ಭೇಟಿಯಲ್ಲಿರುವ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂಬ ಟೊಳ್ಳು ಹೇಳುವ ಬದಲು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸರ್ಕಾರ ಹೊಣೆಗಾರಿಕೆ ವಹಿಸಬೇಕೆಂದು ಕಾಂಗ್ರೆಸ್ ನಿನ್ನೆ ಒತ್ತಾಯಿಸಿತ್ತು. ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ವಪಕ್ಷ ಸಭೆ ಕರೆಯಬೇಕೆಂದು ಒತ್ತಾಯಿಸಿತ್ತು.
ವಿರೋಧ ಪಕ್ಷವು ಭಯೋತ್ಪಾದಕ ದಾಳಿಯನ್ನು ಮಾನವೀಯತೆಯ ಮೇಲಿನ ಕಳಂಕ ಎಂದು ಖಂಡಿಸಿದೆ. ಅದನ್ನು ಪರಿಣಾಮಕಾರಿಯಾಗಿ ಉತ್ತರಿಸದೆ ಬಿಡಬಾರದು ಎಂದು ಹೇಳಿದೆ.
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಪ್ರಮುಖ ಪ್ರವಾಸಿ ತಾಣದ ಮೇಲೆ ನಿನ್ನೆ ಮಂಗಳವಾರ ಭಯೋತ್ಪಾದಕರು ದಾಳಿ ನಡೆಸಿದ್ದರಲ್ಲಿ ಕನಿಷ್ಠ 26 ಜನರು ಮೃತಪಟ್ಟು ಹಲವಾರು ಜನರು ಗಾಯಗೊಂಡಿದ್ದಾರೆ.
26 ಮಂದಿ ಮೃತಪಟ್ಟವರಲ್ಲಿ ಯುಎಇ ಮತ್ತು ನೇಪಾಳದ ಇಬ್ಬರು ವಿದೇಶಿಯರೂ ಮತ್ತು ಇಬ್ಬರು ಸ್ಥಳೀಯರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಭಯೋತ್ಪಾದಕ ದಾಳಿಯನ್ನು ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಾವು ನೋಡಿದ ಯಾವುದೇ ಘಟನೆಗಿಂತ ದೊಡ್ಡದು ಎಂದು ಬಣ್ಣಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ