ಮಾಧ್ಯಮಗಳು ಸೇನಾ ಕಾರ್ಯಾಚರಣೆಯ ನೇರ ಪ್ರಸಾರ ಮಾಡದಂತೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ!
ನವದೆಹಲಿ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರವನ್ನು ಮಾಡದಂತೆ ಮಾಧ್ಯಮಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶನಿವಾರ ಮಾರ್ಗಸೂಚಿಯನ್ನು ಹೊರಡಿಸಿದೆ.
ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಮಾಧ್ಯಮಗಳು, ಡಿಜಿಟಲ್ ವೇದಿಕೆಗಳು ಮತ್ತು ವ್ಯಕ್ತಿಗಳ ಪಾತ್ರ ಮಹತ್ವದ್ದಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಅಥವಾ ಭದ್ರತಾ ಪಡೆಗಳ ಚಲನವಲನಕ್ಕೆ ಸಂಬಂಧಿಸಿದಂತೆ ಮೂಲಗಳನ್ನು ಆಧಾರಿಸಿದ ವರದಿಯನ್ನು ತಡೆಯುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಸೂಕ್ಷ್ಮ ಮಾಹಿತಿಯ ಬಹಿರಂಗ ಪ್ರತಿಕೂಲ ಅಂಶಗಳಿಗೆ ನೆರವಾಗುತ್ತದೆ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವ, ಭದ್ರತಾ ಸಿಬ್ಬಂದಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದೆ.
ಹಿಂದಿನ ಘಟನೆಗಳ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ವರದಿಯ ಪ್ರಾಮುಖ್ಯತೆಯನ್ನು ಸಚಿವಾಲಯ ಪ್ರಮುಖವಾಗಿ ಪ್ರಸ್ತಾಪಿಸಿದೆ.
ಕಾರ್ಗಿಲ್ ಯುದ್ಧ, ಮುಂಬೈ ಭಯೋತ್ಪಾದಕ ದಾಳಿ (26/11) ಕಂದಹಾರ್ ಅಪಹರಣದಂತಹ ಘಟನೆಗಳ ಸಮಯದಲ್ಲಿ ಅನಿಯಂತ್ರಿತ ಪ್ರಸಾರವು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಿತು. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ತಿದ್ದುಪಡಿ ನಿಯಮಗಳು ಭದ್ರತಾ ಪಡೆಗಳ ಯಾವುದೇ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನೇರ ಪ್ರಸಾರವನ್ನು ಮಾಡಬಾರದು ಎಂದು ಹೇಳುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ