ಭಾರತ ತೊರೆಯಲು ಗಡುವು ಅಂತ್ಯ: ನೂರಾರು ಪಾಕ್ ಪ್ರಜೆಗಳು ಸ್ವದೇಶಕ್ಕೆ ತೆರಳಲು ಅಟ್ಟಾರಿ ಗಡಿಯಲ್ಲಿ ಸಾಲು!
ಚಂಡೀಗಢ: ಸಾರ್ಕ್ ವೀಸಾದಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ತೆರಳಲು ವಿಧಿಸಿದ್ದ ಗಡುವು ಅಂತ್ಯಗೊಂಡಿದ್ದು, ನೂರಾರು ಮಂದಿ ಪಂಜಾಬಿನ ಅಟ್ಟಾರಿ ವಾಘಾ ಗಡಿ ಮೂಲಕ ತಮ್ಮ ದೇಶಕ್ಕೆ ತೆರಳಿದ್ದಾರೆ.
ಈ ವೇಳೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಂಬಂಧಿಕರು ಕಣ್ಣೀರ ವಿದಾಯ ಹೇಳಿದ್ದಾರೆ. 'ನನ್ನ ತಾಯಿ ಭಾರತೀಯಳು ಮತ್ತು ಅವರನ್ನು ಪಾಕಿಸ್ತಾನಕ್ಕೆ ನಮ್ಮೊಂದಿಗೆ ಬರಲು ಅನುಮತಿ ನೀಡಿಲ್ಲ. ಮುಂದೆ ಯಾವಾಗ ನೋಡುತ್ತೇನೆ ಎಂಬುದು ತಿಳಿದಿಲ್ಲ ಎಂದು ಯುವತಿ ಸರಿತಾ ಕಣ್ಣೀರು ಹಾಕಿದರು. ಭಾನುವಾರ ಭಾರತದಿಂದ ನಿರ್ಗಮಿಸಲು ಅಟ್ಟಾರಿ ಗಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಆಕೆಯ ಸಹೋದರ ಹಾಗೂ ತಂದೆ ಕೂಡಾ ಇದ್ದರು.
ಸರಿತಾ, ಅವರ ಸಹೋದರ ಮತ್ತು ಅವರ ತಂದೆ ಪಾಕಿಸ್ತಾನಿಯರು. ಆದರೆ, ಅವರ ತಾಯಿ ಭಾರತೀಯರು. ನನ್ನ ತಾಯಿ ನಮ್ಮ ಜೊತೆಯಲ್ಲಿ ಬರಲು ಅನುಮತಿ ನೀಡುವುದಿಲ್ಲ ಎಂದು ಗಡಿಯಲ್ಲಿರುವ ಅಧಿಕಾರಿಗಳು ಹೇಳುತ್ತಿದ್ದಾರೆ. ಏಪ್ರಿಲ್ 29 ರಂದು ನಡೆಯಲಿದ್ದ ಸಂಬಂಧಿಕರ ವಿವಾಹ ಸಮಾರಂಭಕ್ಕಾಗಿ ನಮ್ಮ ಕುಟುಂಬಕ್ಕೆ ಭಾರತಕ್ಕೆ ಬಂದಿತ್ತು ಎಂದು ಸರಿತಾ ಹೇಳಿದರು. 1991ರಲ್ಲಿ ನನ್ನ ಪೋಷಕರು ವಿವಾಹವಾಗಿದ್ದರು. ನನ್ನ ತಾಯಿ ಭಾರತೀಯಳಾಗಿದ್ದು, ಭಾರತೀಯ ಪಾಸ್ ಪೋರ್ಟ್ ಹೊಂದಿರುವವರಿಗೆ ಪಾಕಿಸ್ತಾನಕ್ಕೆ ತೆರಳಲು ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದಾಗಿ ಅವರು ತಿಳಿಸಿದರು.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಭಾರತದ 26 ಪ್ರವಾಸಿಗರು ಹತ್ಯೆಯಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವಂತೆಯೇ ಸಾರ್ಕ್ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿದ್ದ ನಿರ್ಗಮನದ ಗಡುವು ಏ. 26 ರಂದು ಕೊನೆಗೊಂಡಿದೆ. ಆದರೆ ವೈದ್ಯಕೀಯ ವೀಸಾದಲ್ಲಿರುವವರನ್ನು ಹೊರತುಪಡಿಸಿ ಉಳಿದವರನ್ನು ದೇಶ ಬಿಟ್ಟು ಹೋಗಲು ಭಾನುವಾರ ಕಡೆಯ ದಿನವಾಗಿದೆ.
ಪಾಕ್ ಪ್ರಜೆಗಳಿಗೆ ನೀಡಲಾಗಿರುವ ವೈದ್ಯಕೀಯ ವೀಸಾ ಏ. 29ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಅಟ್ಟಾರಿ ಗಡಿಯಲ್ಲಿ ಪಾಕ್ ಪ್ರಜೆಗಳು ತಮ್ಮದೇಶಕ್ಕೆ ತೆರಳಲು ಧಾವಿಸಿದಾಗ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತಮ್ಮ ಸಂಬಂಧಿಕರನ್ನು ಬೀಳ್ಕೊಡಲು ಗಡಿಗೆ ಅನೇಕ ಭಾರತೀಯ ಬಂದಿದ್ದರು. ಬಹುತೇಕ ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿನ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಂದಿರುವುದಾಗಿ ಹೇಳಿದರು.
ಕೆಲವರು ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಬಂದಿದ್ದರು ಆದರೆ ಈಗ ಭಾಗವಹಿಸದೆ ಪಾಕಿಸ್ತಾನಕ್ಕೆ ತೆರಳಬೇಕಾಗಿದೆ. ತಮ್ಮ ತಾಯಿಯ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಅವರ ಮಕ್ಕಳು 36 ವರ್ಷಗಳ ನಂತರ ತಮ್ಮನ್ನು ಭೇಟಿ ಮಾಡಲು ಬಂದಿದ್ದರು. ಆದರೆ ಗುಡುವಿಗಿಂತ ಮುಂಚಿತವಾಗಿ ಹಿಂತಿರುಗುತ್ತಿದ್ದಾರೆ ಎಂದು ಜೈಸಲ್ಮೇರ್‌ನ ವ್ಯಕ್ತಿಯೊಬ್ಬರು ತಿಳಿಸಿದರು.
ಏಪ್ರಿಲ್ 15 ರಂದು ಪಾಕಿಸ್ತಾನದ ಅಮರಕೋಟ್‌ನಿಂದ 45 ದಿನಗಳ ವೀಸಾದೊಂದಿಗೆ ಬಂದಿದ್ದಾರೆ. ಪರಿಸ್ಥಿತಿ ಹೀಗಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಅವರ ಎಲ್ಲಾ ಸಂಬಂಧಿಕರನ್ನು ಭೇಟಿ ಮಾಡಲು ಅವರಿಗೆ ಸಮಯ ಸಿಗಲಿಲ್ಲ" ಎಂದು ಅವರು ಹೇಳಿದರು.
ಗಡುವು ಮುಗಿದ ನಂತರ ದೇಶ ತೊರೆಯದವರು ಹೊಸದಾಗಿ ಜಾರಿಗೆ ತಂದಿರುವ ವಲಸೆ ಮತ್ತು ವಿದೇಶಿಯರ ಕಾಯ್ದೆ 2025 ರ ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾರತ ಎಚ್ಚರಿಸಿದೆ. ತನ್ನ ಚಿಕ್ಕಮ್ಮನನ್ನು ಅಟ್ಟಾರಿ ಗಡಿಗೆ ಬಿಡಲು ದೆಹಲಿಯಿಂದ ಬಂದಿದ್ದ ಮೊಹಮ್ಮದ್ ಆರಿಫ್, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು. ಭಯೋತ್ಪಾದಕರು "ಮಾನವೀಯತೆಯನ್ನು ಕೊಂದಿದ್ದಾರೆ ಮತ್ತು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಕರಾಚಿಯಿಂದ ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಮೊಹಮ್ಮದ್ ಸಲೀಂ 45 ದಿನಗಳ ವೀಸಾದಲ್ಲಿ ಬಂದಿದ್ದರು ಆದರೆ ಅನಿರೀಕ್ಷಿತ ಭೀಕರ ಬೆಳವಣಿಗೆಗಳಿಂದಾಗಿ ತನ್ನ ಸಹಪ್ರಜೆಗಳಂತೆ ಮನೆಗೆ ಮರಳಬೇಕಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ