ಜಾತಿ ಗಣತಿಗೆ ಹಣ ಹಂಚಿಕೆ ಮಾಡಿ, ಟೈಮ್ ಲೈನ್ ನೀಡಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

11 ವರ್ಷಗಳ ಕಾಲ ವಿರೋಧಿಸಿದ ನಂತರ ಈಗ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸುವ ಸರ್ಕಾರದ "ಹಠಾತ್" ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಜಾತಿ ಗಣತಿಯನ್ನು "ಸಂಪೂರ್ಣ ಪಾರದರ್ಶಕತೆ"ಯೊಂದಿಗೆ ಆರಂಭಿಸಲು ಕೇಂದ್ರ ಸರ್ಕಾರ ಹಣವನ್ನು ಮಂಜೂರು ಮಾಡಬೇಕು ಎಂದು ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ.

ಮುಂಬರುವ ಜನಗಣತಿ ಪ್ರಕ್ರಿಯೆಯಲ್ಲಿ ಜಾತಿ ಗಣತಿಯನ್ನು "ಪಾರದರ್ಶಕ" ರೀತಿಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. "ಜಾತಿ ಆಧಾರದ ಮೇಲೆ ಸಮಾಜವನ್ನು ವಿಭಜಿಸಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಸಾಮಾಜಿಕ ನ್ಯಾಯದ ಅನುಷ್ಠಾನವನ್ನು ತಪ್ಪಿಸುತ್ತಿದ್ದಾರೆ" ಎಂದು ಆರೋಪಿಸಿದರು.

ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ
ಜಾತಿ ಗಣತಿಗೆ ಕೇಂದ್ರ ಸರ್ಕಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಿಯಾಕ್ಷನ್ ಏನು?

"ಸಂಪೂರ್ಣ ಪಾರದರ್ಶಕತೆಯೊಂದಿಗೆ ಜಾತಿ ಜನಗಣತಿ ಕಾರ್ಯ ಆರಂಭಿಸಲು ಬಜೆಟ್ ಹಂಚಿಕೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ" ಎಂದು ಖರ್ಗೆ ಹೇಳಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಜಾತಿ ಜನಗಣತಿ ನಡೆಸಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತ ಬಂದಿದೆ ಎಂದು ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

"ಇಂದು, ಮೋದಿ ಸರ್ಕಾರ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ನಡೆಸುವುದಾಗಿ ಘೋಷಿಸಿದೆ. ಇದು ನಾವು ಮೊದಲ ದಿನದಿಂದಲೇ ಒತ್ತಾಯಿಸುತ್ತಿರುವ ಸರಿಯಾದ ಕ್ರಮವಾಗಿದೆ. ನಾನು ಇದನ್ನು ಸಂಸತ್ತಿನಲ್ಲಿ ಹಲವು ಬಾರಿ ಎತ್ತಿದ್ದೇನೆ ಮತ್ತು ಈ ಸಂಬಂಧ ಪ್ರಧಾನಿಗೆ ಪತ್ರವನ್ನೂ ಬರೆದಿದ್ದೇನೆ" ಎಂದರು.

ಮೋದಿ ಪದೇ ಪದೇ ಈ ಸಾಮಾಜಿಕ ನ್ಯಾಯದ ನೀತಿ ಜಾರಿಗೆ ತರುವುದನ್ನು ತಪ್ಪಿಸುತ್ತಲೇ ಇದ್ದರು ಮತ್ತು ವಿರೋಧ ಪಕ್ಷಗಳು ಜಾತಿ ಆಧಾರದ ಮೇಲೆ ಸಮಾಜವನ್ನು ವಿಭಜಿಸುತ್ತಿವೆ ಎಂದು ಸುಳ್ಳು ಆರೋಪ ಮಾಡುತ್ತಲೇ ಇದ್ದರು" ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

"ಈ ವರ್ಷದ ಬಜೆಟ್‌ನಲ್ಲಿ ಜನಗಣತಿಗೆ ಕೇವಲ 575 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದ್ದರಿಂದ ಸರ್ಕಾರ ಅದನ್ನು ಹೇಗೆ ಮತ್ತು ಯಾವಾಗ ಪೂರ್ಣಗೊಳಿಸುತ್ತದೆ?" ಎಂದು ಖರ್ಗೆ ಪ್ರಶ್ನಿಸಿದರು.

"11 ವರ್ಷಗಳ ಕಾಲ ವಿರೋಧಿಸಿದ" ನಂತರ ಈಗ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸುವ ಸರ್ಕಾರದ "ಹಠಾತ್" ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಅದರ ಅನುಷ್ಠಾನಕ್ಕೆ ಒಂದು ಟೈಮ್ ಲೈನ್ ನೀಡಬೇಕು ಎಂದಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನಾವು ಇದನ್ನು(ಸರ್ಕಾರದ ನಿರ್ಧಾರ) ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ ನಮಗೆ ಒಂದು ಕಾಲಮಿತಿ ಬೇಕು. ಅದು ಯಾವಾಗ ಮಾಡಲಾಗುತ್ತದೆ ಎಂದು ತಿಳಿಯಲು ನಾವು ಬಯಸುತ್ತೇವೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com