
ನವದೆಹಲಿ: ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭಾರತೀಯ ಚುನಾವಣಾ ಆಯೋಗದ (ECI) ಮೇಲಿನ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದಾರೆ, ಬಿಜೆಪಿಗಾಗಿ ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಸಂಸತ್ತಿನ ಆವರಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆ ನಡೆಯಲಿರುವ ಬಿಹಾರದಲ್ಲಿ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನ ಬಗ್ಗೆ ಕೇಳಿದಾಗ, ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿಯಾಗಿರುವುದಕ್ಕೆ ನಮ್ಮ ಬಳಿ ಸ್ಪಷ್ಟವಾದ ನೇರ ಸಾಕ್ಷಿಯಿದೆ ಎಂದು ಹೇಳಿದ್ದಾರೆ.
ಮತ ಕಳ್ಳತನ ನಡೆಯುತ್ತಿದೆ ಎಂದು ನಾವು ಹೇಳಿದ್ದೇವೆ, ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಸ್ಪಷ್ಟ ಪುರಾವೆಯಿದೆ. ನಾನು ಅದನ್ನು ಸುಮ್ಮನೆ ಹಗುರವಾಗಿ ಹೇಳುತ್ತಿಲ್ಲ, ನೂರಕ್ಕೆ ನೂರರಷ್ಟು ಪುರಾವೆಗಳೊಂದಿಗೆ ಹೇಳುತ್ತಿದ್ದೇನೆ. ಪುರಾವೆಗಳನ್ನು ಬಿಡುಗಡೆ ಮಾಡಿದ ತಕ್ಷಣ, ಚುನಾವಣಾ ಆಯೋಗವು ಬಿಜೆಪಿಗೆ ಹೇಗೆ ಮತ ಕಳ್ಳತನ ಮಾಡಲು ಕೆಲಸ ಮಾಡುತ್ತಿದೆ ಎಂದು ಇಡೀ ರಾಷ್ಟ್ರಕ್ಕೆ ಗೊತ್ತಾಗುತ್ತದೆ ಎಂದರು.
ಆಟಂ ಬಾಂಬ್ ಸಿಡಿಸಿದ್ದೇವೆ
ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಅವರು, ಚುನಾವಣಾ ಆಯೋಗದ ದುಷ್ಕೃತ್ಯದ ಪುರಾವೆಗಳನ್ನು ತನಿಖೆ ಮಾಡಿದ ಕಾಂಗ್ರೆಸ್ ಆಟಂಬಾಬ್ ನ್ನು ಸಿಡಿಸಿದೆ. ಇದನ್ನು ದೇಶದ್ರೋಹದ ಕೃತ್ಯ ಎಂದು ಕರೆಯುತ್ತಾರೆ ಎಂದು ರಾಹುಲ್ ಗಾಂಧಿ ಎಂದು ಗುಡುಗಿದರು.
ದೇಶದ್ರೋಹ ಕೃತ್ಯ
ಮಧ್ಯಪ್ರದೇಶ ಚುನಾವಣೆ, ಕಳೆದ ವರ್ಷದ ಲೋಕಸಭಾ ಚುನಾವಣೆಗಳಲ್ಲಿ ನಮಗೆ ಅನುಮಾನವಿತ್ತು, ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲಿ ನಮ್ಮ ಅನುಮಾನ ಹೆಚ್ಚಾಯಿತು. ನಾವು ಆರು ತಿಂಗಳ ಕಾಲ ನಮ್ಮದೇ ಆದ ತನಿಖೆ ನಡೆಸಿದ್ದೇವೆ, ತನಿಖೆಯ ನಂತರ ನಮಗೆ ಸಿಕ್ಕಿದ್ದು ಪರಮಾಣು ಬಾಂಬ್.
ಈ ಪರಮಾಣು ಬಾಂಬ್ ಸ್ಫೋಟಗೊಂಡಾಗ ಚುನಾವಣಾ ಆಯೋಗವು ದೇಶದಲ್ಲಿ ಗೋಚರಿಸುವುದಿಲ್ಲ. ಚುನಾವಣಾ ಆಯೋಗದಲ್ಲಿ ಮೇಲಿನ ಹುದ್ದೆಯಿಂದ ಕೆಳಗಿನ ಹುದ್ದೆಯವರೆಗೆ ಯಾರೇ ಇದನ್ನು ಮಾಡುತ್ತಿದ್ದರೂ, ನಾವು ಅವರನ್ನು ಬಿಡುವುದಿಲ್ಲ ಏಕೆಂದರೆ ಅವರು ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಇದು ದೇಶದ್ರೋಹಕ್ಕಿಂತ ಕಡಿಮೆಯ ಕೃತ್ಯವಲ್ಲ ಎಂದು ಬಣ್ಣಿಸಿದರು.
ಈ ಹಿಂದೆಯೂ ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗವನ್ನು ಚುನಾವಣಾ ವಂಚನೆಯಲ್ಲಿ ತೊಡಗಿದ್ದು, ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ಪದೇ ಪದೇ ಆರೋಪಿಸಿಕೊಂಡು ಬಂದಿದ್ದರು.
ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಗದ್ದಲ, ಕೋಲಾಹಲ
ಬಿಹಾರದಲ್ಲಿ ಮತದಾರರ ಪಟ್ಟಿಯ SIR ಕುರಿತು ಚರ್ಚೆಗೆ ಬಿಗಿ ಪಟ್ಟು ಹಿಡಿದಿರುವ ವಿರೋಧ ಪಕ್ಷಗಳು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಅಡ್ಡಿಪಡಿಸುತ್ತಲೇ ಬಂದಿವೆ.ಕಲಾಪ ಸುಗಮವಾಗಿ ಸಾಗಲೇ ಇಲ್ಲ. ಜುಲೈ 23 ರಂದು ರಾಹುಲ್ ಗಾಂಧಿ ಮಾತನಾಡುತ್ತಾ, ಭಾರತದಲ್ಲಿ ಮತಗಳನ್ನು ಹೇಗೆ ಕದಿಯಲಾಗುತ್ತಿದೆ ಎಂದು ಕಾಂಗ್ರೆಸ್ ಕಂಡುಹಿಡಿದಿದೆ ಎಂದು ಹೇಳಿದ್ದರು.
ಮತಗಳ ಕಳ್ಳತನ ಹೇಗೆ ನಡೆಯುತ್ತಿದೆ ಎಂಬುದನ್ನು ಜನರು ಮತ್ತು ಚುನಾವಣಾ ಆಯೋಗದ ಮುಂದೆ ಸ್ಪಷ್ಟವಾಗಿ ನೇರವಾಗಿ ಮುಂದಿಡುವುದಾಗಿ ಪ್ರತಿಪಾದಿಸಿದ್ದರು.
ಇದಕ್ಕೂ ಮೊದಲು, ಬಿಜೆಪಿ ಮತ್ತು ಚುನಾವಣಾ ಆಯೋಗವು ಬಿಹಾರದಲ್ಲಿ ವಿಧಾನಸಭಾ ಚುನಾವಣೆಯನ್ನು ಕದಿಯಲು ಪಿತೂರಿ ರೂಪಿಸುತ್ತಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದರು.
Advertisement