
ನವದೆಹಲಿ: ಆಗಸ್ಟ್ 1 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಬಿಹಾರದ ಯಾವುದೇ ರಾಜಕೀಯ ಪಕ್ಷಗಳು ಇಲ್ಲಿಯವರೆಗೆ ಸಂಪರ್ಕಿಸಿಲ್ಲ ಎಂದು ಚುನಾವಣಾ ಆಯೋಗ ಭಾನುವಾರ ಹೇಳಿದೆ.
ಆಗಸ್ಟ್ 1 ರ ಮಧ್ಯಾಹ್ನ 3 ರಿಂದ ಆಗಸ್ಟ್ 3 (ಭಾನುವಾರ) 3 ರ ನಡುವೆ ಯಾವುದೇ ಹಕ್ಕು ಮತ್ತು ಆಕ್ಷೇಪಣೆ ಅಡಿ ಯಾವುದೇ ಬೇಡಿಕೆಯನ್ನು ಸ್ವೀಕರಿಸಲಾಗಿಲ್ಲ ಎಂದು EC ಹೇಳಿದೆ.
ಆದರೆ ವೈಯಕ್ತಿಕವಾಗಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಸೇರಿಸಲು ಅಥವಾ ಅನರ್ಹರು ಎಂದು ಹೇಳುವವರನ್ನು ತೆಗೆದುಹಾಕಲು ಮತದಾರರಿಂದ 941 ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ರಾಜಕೀಯ ಪಕ್ಷಗಳು ಮತ್ತು ಮತದಾರರು ಮತದಾರರ ಪಟ್ಟಿಯಿಂದ ಹೆಸರನ್ನು ಸೇರಿಸಲು ಅಥವಾ ತೆಗೆದುಹಾಕಲು ಒತ್ತಾಯಿಸಲು ಸೆಪ್ಟೆಂಬರ್ 1 ರವರೆಗೆ ಒಂದು ತಿಂಗಳ ಕಾಲಾವಕಾಶವಿದೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ಮುಗಿಬಿದ್ದಿರುವ ವಿಪಕ್ಷಗಳು, ಈ ಪ್ರಕ್ರಿಯೆಯಿಂದ ದಾಖಲೆಗಳ ಕೊರತೆಯಿಂದಾಗಿ ಕೋಟ್ಯಂತರ ಅರ್ಹ ವ್ಯಕ್ತಿಗಳಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸುತ್ತಿವೆ.
ಸೆಪ್ಟೆಂಬರ್ 30 ರಂದು ಪ್ರಕಟಿಸಲಿರುವ ಅಂತಿಮ ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ವ್ಯಕ್ತಿ ಹೊರಗುಳಿಯುವುದಿಲ್ಲ ಎಂಬ ಖಾತ್ರಿಯಿದೆ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.
Advertisement