
ಮುಂಬೈ: ಪರ್ಭಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡುವುದಾಗಿ ಮಹಾರಾಷ್ಟ್ರ ಸಚಿವೆ ಮೇಘನಾ ಬೋರ್ಡಿಕರ್ ಅವರು ಬೆದರಿಕೆ ಹಾಕಿದ್ದು, ಅದರ ವಿಡಿಯೋವನ್ನು ಮಹಾರಾಷ್ಟ್ರ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಹಂಚಿಕೊಂಡಿದ್ದಾರೆ.
ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರೋಹಿತ್ ಪವಾರ್, "ಸದನದಲ್ಲಿ ರಮ್ಮಿ ಆಡುವವರು, ಚೀಲಗಳಲ್ಲಿ ಹಣ ತುಂಬುವವರು, ಡ್ಯಾನ್ಸ್ ಬಾರ್‌ಗಳನ್ನು ನಡೆಸುವವರು, ಮೊದಲು ತಪ್ಪುಗಳನ್ನು ಮಾಡುತ್ತಾರೆ. ನಂತರ ಅವುಗಳನ್ನು ವೈಭವೀಕರಿಸಿ, ಸಂಭ್ರಮಿಸುತ್ತಾರೆ. ಈಗ ಹೊಸ ಸೇರ್ಪಡೆಯೆಂದರೆ, ಕಾರ್ಯಕ್ರಮದ ಸಮಯದಲ್ಲಿ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡುವುದಾಗಿ ಸಚಿವೆ ಬೆದರಿಕೆ ಹಾಕುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.
ವಸತಿ ಯೋಜನೆಯ ಫಲಾನುಭವಿಗಳಿಗೆ ಸಂಬಂಧಿಸಿದ ಟಾರ್ಗೆಟ್ ತಲುಪಲು ವಿಫಲವಾದ ಕಾರಣ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ಗ್ರಾಮ ಸೇವಕನಿಗೆ ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ ಸಚಿವರ ಕ್ರಮವನ್ನು ರೋಹಿತ್ ಪವಾರ್ ಪ್ರಶ್ನಿಸಿದ್ದಾರೆ.
"ದೇವೇಂದ್ರ ಫಡ್ನವೀಸ್ ಜಿ, ನಿಮ್ಮ ಸಂಪುಟದಲ್ಲಿ ಯಾವ ರೀತಿಯ 'ಸಜ್ಜನ'(ಸಭ್ಯ) ಮಂತ್ರಿಗಳನ್ನು ಹೊಂದಿದ್ದೀರಿ? ನಿಮ್ಮ ಸಂಪುಟದ ಇಮೇಜ್‌ಗೆ ಹಾನಿಯಾಗಿದೆ ಮತ್ತು ಮುಖ್ಯವಾಗಿ, ಮಹಾರಾಷ್ಟ್ರದ ಘನತೆಗೆ ಧಕ್ಕೆಯಾಗುತ್ತಿದೆ. ದಯವಿಟ್ಟು ಅವರನ್ನು ನಿಯಂತ್ರಿಸಿ" ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇನ್ನು ವಿಡಿಯೋ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಆರೋಗ್ಯ ಖಾತೆ ರಾಜ್ಯ ಸಚಿವ ಮೇಘನಾ ಬೋರ್ಡಿಕರ್, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
"ಎಡಿಟ್ ಮಾಡಿದ ಕ್ಲಿಪ್ ಅನ್ನು ಪೋಸ್ಟ್ ಮಾಡುವ ಮೂಲಕ ಯಾರೂ ಸಾರ್ವಜನಿಕರನ್ನು ದಾರಿ ತಪ್ಪಿಸಲು ಪ್ರಯತ್ನಿಸಬಾರದು. ನಾನು ಹೇಳಿದ್ದು ಜನರ ಹಿತಾಸಕ್ತಿಗಾಗಿ. ನಾನು ಜಿಲ್ಲಾ ಪರಿಷತ್ ಅಧಿಕಾರಿಗಳ ಮುಂದೆ ಮಾತನಾಡುತ್ತಾ, ತನ್ನ ಕೆಲಸವನ್ನು ಸುಧಾರಿಸಿಕೊಳ್ಳದ ಒಬ್ಬ ಸಿಬ್ಬಂದಿಯ ಬಗ್ಗೆ ಮಾತನಾಡುತ್ತಿದ್ದೆ ಎಂದಿದ್ದಾರೆ.
Advertisement