
ನವದೆಹಲಿ: ಬಿಜೆಪಿ ಶಾಸಕ ಬಸನಗೌಡ ಆರ್ ಪಾಟೀಲ್ ಯತ್ನಾಳ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಾಲಯದ ಹೊರಗಡೆ ರಾಜಕೀಯ ಹೋರಾಟ ಇರಲಿ, ಇಲ್ಲಿ ಬೇಡ ಎಂದು ಯಾವಾಗಲೂ ಎಲ್ಲರಿಗೂ ಹೇಳುತ್ತಿರುವುದಾಗಿ ಹೇಳಿದರು. ಬಿ. ಆರ್ ಗವಾಯಿ ಅವರೊಂದಿಗೆ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ನ್ಯಾಯಪೀಠದಲ್ಲಿದ್ದರು.
ಭಾರತೀಯ ನ್ಯಾಯ ಸುರಕ್ಷಾ ಸಂಹಿತಾ (BNSS) ಅಡಿಯಲ್ಲಿ ಕಾರ್ಯವಿಧಾನವನ್ನು ಅನುಸರಿಸದ ಕಾರಣ ಯತ್ನಾಳ್ ಅವರ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 28, 2024 ರಂದು ರದ್ದುಗೊಳಿಸಿದ್ದು, ಅರ್ಜಿದಾರರು ಹಾಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ ಎಂದು ವಕೀಲರು ಹೇಳಿದರು.
ಅದಕ್ಕೆ ಏನು? ಎಂದು ಪ್ರಶ್ನಿಸಿದ ಸಿಜೆಐ, ರೂ.25,000 ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸಿದರು. ತದನಂತರ ದಂಡವನ್ನು ರೂ.1 ಕೋಟಿಗೆ ಹೆಚ್ಚಿಸಿದರು. ವಕೀಲರ ವಾದದ ಬಳಿಕ ದಂಡವನ್ನು ಮನನ್ನಾ ನ್ಯಾಯಾಲಯ, ಮೇಲ್ಮನವಿ ಹಿಂಪಡೆಯಲು ಅನುಮತಿ ನೀಡಿತು.
2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ರ್‍ಯಾಲಿಯಲ್ಲಿ ಯತ್ನಾಳ್ ನೀಡಿದ ಅವಹೇಳನಕಾರಿ ಹೇಳಿಕೆ ಆರೋಪದಲ್ಲಿ ಪಾಟೀಲ್ ಅವರು ಬಿಎನ್‌ಎಸ್‌ಎಸ್‌ನ ಸೆಕ್ಷನ್ 223 ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಯಾತ್ನಾಳ್ ಹೇಳಿಕೆಯಿಂದ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂದು ಹೇಳಿದ್ದರು. ಆದಾಗ್ಯೂ, ಯತ್ನಾಳ್ ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿತ್ತು.
Advertisement