
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸತತ ನಾಲ್ಕನೇ ದಿನವೂ ಗುಂಡಿನ ಕಾಳಗ ಮುಂದುವರಿದಿದ್ದು, ಇದು 2 ವರ್ಷದಲ್ಲಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ನಡೆಯುತ್ತಿರುವ ಅತಿಧೀರ್ಘ ಕಾರ್ಯಾಚರಣೆ ಎನಿಸಿದೆ.
ಭಯೋತ್ಪಾದಕರ ನಿಖರವಾದ ಸ್ಥಳವನ್ನು ಗುರುತಿಸಲು ಡ್ರೋಣ್ , ಮಾನವರಹಿತ ವೈಮಾನಿಕ ವಾಹನಗಳು ಮತ್ತು ಸೇನಾ ಹೆಲಿಕಾಪ್ಟರ್‌ಗಳು ಈ ಪ್ರದೇಶದ ಮೇಲೆ ಸುಳಿದಾಡುತ್ತಿವೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದಕರು ದಟ್ಟ ಕಾಡುಗಳಲ್ಲಿ ಅಡಗಿಕೊಂಡಿದ್ದು, ಸೇನಾ ಪಡೆಗಳು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಶಂಕಿತ ಅಡಗುತಾಣಗಳ ಮೇಲೆ ಸ್ಫೋಟಕ ಸಾಧನ ಎಸೆಯಲಾಗುತ್ತಿದ್ದು ಇದರಿಂದ ವ್ಯಾಪಕ ಹಾನಿಯಾಗಿದೆ.
ಲಷ್ಕರ್-ಎ-ತೈಬಾ ಸದಸ್ಯರ ಗುಂಪಿನ ಕೈವಾಡವಿರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ಸೈನ್ಯ, ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಕಾಡಿನಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ನಂತರ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಮೂವರು ಸೇನಾ ಸಿಬ್ಬಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಮೂಲಗಳು ತಿಳಿಸಿವೆ.
ಸಾವುನೋವುಗಳನ್ನು ತಪ್ಪಿಸಲು ಸೇನಾ ಪಡೆಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿವೆ, ಉಳಿದ ಉಗ್ರರು ತಪ್ಪಿಸಿಕೊಳ್ಳದಂತೆ ಇಡೀ ಪ್ರದೇಶಕ್ಕೆ ಸರ್ಪಗಾವಲು ವಿಧಿಸಲಾಗಿದೆ ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಕಾರ್ಯಾಚರಣೆ ದೀರ್ಘಕಾಲದವರೆಗೆ ಆಗಬಹುದು ಎಂದು ಮೂಲವೊಂದು ತಿಳಿಸಿದೆ.
Advertisement